ಮೈಸೂರು:ಇತ್ತೀಚೆಗೆ ಮಳೆಗಾಲದಲ್ಲಿ ಹೆಚ್ಚಾಗಿ ಭೂ ಕುಸಿತಗಳು ಆಗುತ್ತಿದ್ದು, ಇದಕ್ಕೆ ಕಾರಣಗಳು ಏನು, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಿ. ನಾಗರಾಜು ಈಟಿವಿ ಭಾರತ್ಗೆ ಸಂದರ್ಶನ ನೀಡಿದ್ದಾರೆ.
ಸಂದರ್ಶನದಲ್ಲಿ ಮಾಹಿತಿಗಳು ಹಂಚಿಕೊಂಡ ಪ್ರೊ. ನಾಗರಾಜು, ಕಳೆದ 50 ವರ್ಷಗಳ ಹಿಂದೇ ಈ ರೀತಿಯಾ ಸಮಸ್ಯೆಗಳು ಇರಲ್ಲಿಲ್ಲ. ಆದರೆ, ಇತ್ತೀಚೆಗೆ ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಂಡೇ ಐತಿಹಾಸಿಕ ಸ್ಥಳಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಈ ಅವಕಾಶವನ್ನ ಸ್ಥಳೀಯ ಭೂ ಮಾಲೀಕರು ವ್ಯವಹಾರಕ್ಕಾಗಿ ಅದೇ ಸ್ಥಳಗಳನ್ನ ಉಪಯೋಗಿಸಿಕೊಂಡು ರೆಸ್ಟೋರೆಂಟ್, ಲಾಡ್ಜ್, ರಸ್ತೆಗಳ ಧಿಕ್ಕನ್ನು ಬದಲು ಮಾಡುತ್ತಾರೆ. ಇದರಿಂದ ಬಿದ್ದ ಮಳೆಯ ನೀರು ಸ್ವಾಭಾವಿಕವಾಗಿ ಹರಿದು ಹೋಗದೇ ಬೇರೆ ಹರಿಯುವ ಮಾರ್ಗಗಳನ್ನ ಹುಡುಕಿಕೊಳ್ಳುತ್ತದೆ. ಈ ಪ್ರಕ್ರಿಯೆಗಳು ಆ ಪ್ರದೇಶದ ಭೂ ಕುಸಿತಗಳಿಗೆ ಕಾರಣವಾಗುತ್ತದೆ. ಜತಗೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಇದರಿಂದ ಭೂಮಿ ಸಡಿಲವಾಗುತ್ತದೆ. ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರೊ. ನಾಗರಾಜು ಭೂ ಕುಸಿತದ ಕಾರಣಗಳ ಬಗ್ಗೆ ವಿವರಿಸಿದರು.
ಕೇರಳದ ಭೂ ಕುಸಿತಕ್ಕೆ ಕಾರಣವೇನು?: ಕೇರಳದಲ್ಲಿ ಈ ಹಿಂದೆಯೂ ಹಲವು ಸಲ ಭೂ ಕುಸಿತಗಳು ಸಂಭವಿಸಿ, ಅನಾಹುತಗಳು ಘಟಿಸಿವೆ. ಮುಖ್ಯವಾಗಿ ಕೇರಳದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಪ್ರವಾಸಿ ತಾಣಗಳನ್ನಾಗಿ ಬಳಕೆ ಮಾಡಿಕೊಂಡಿದ್ದು, ಮಳೆಗಾಲದಲ್ಲಿ ಬಿದ್ದ ಮಳೆ ನೀರು ಸಲೀಸಾಗಿ ಹೋಗದೇ ಬದಲಿ ಮಾರ್ಗಗಳು ಮೂಲಕ ಹರಿಯುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಅವೈಜ್ಞಾನಿಕ ಕಾರಣಗಳ ಜತೆಗೆ ಹಲವಾರು ಕಾರಣಗಳಿಂದ ಕೇರಳದಲ್ಲಿ ಭೂ ಕುಸಿತಗಳು ಹೆಚ್ಚಾಗುತ್ತಿವೆ ಎಂದು ವಿವರಿಸಿದರು.