ಬೆಂಗಳೂರು: "ಶಾಸಕರು, ಸಂಸದರು, ರಾಜ್ಯಪಾಲರಿಗೆ ನಿಮ್ಮ ನಡೆ ಕಾನೂನು ಬಾಹಿರ ಅಂತ ಮನವರಿಕೆ ಮಾಡಿ ಕೊಡುತ್ತೇವೆ" ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಸಚಿವರು, "ನಾಳೆ ರಾಜಭವನ ಚಲೋ ಮಾಡುತ್ತೇವೆ. ಹೈಕಮಾಂಡ್ಗೂ ಇದರ ಬಗ್ಗೆ ತಿಳಿಸಿದ್ದೇವೆ. ನಾವು ರಾಜಭವನಕ್ಕೆ ಹೋಗುತ್ತೇವೆ, ಅಪಾಯಿಂಟ್‌ಮೆಂಟ್ ಕೇಳುತ್ತೇವೆ. ಅವರು ಎಲ್ಲರಿಗೂ ಒಳಗೆ ಬಿಡಲ್ಲ. ರಾಜ್ಯಪಾಲರು ಶೋಕಾಸ್ ನೊಟೀಸ್ ಕೊಟ್ಟಿರುವುದು ಕಾನೂನು ಬಾಹಿರ. ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದೆವು. ಅವರು ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ. ಕೋರ್ಟ್ನಲ್ಲಿ ವಿಚಾರಣೆ ನಡೀತಿದೆ. ಈಗ ಈ ಪ್ರಕರಣ ರಾಜಕೀಯಕರಣಗೊಂಡಿದೆ. ವಿಭಾಗವಾರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಇದರ ಜತೆಗೆ ಕಾನೂನು ಸಮರವನ್ನೂ ಮುಂದುವರೆಸಿದ್ದೇವೆ. ಈಗ ರಾಜ್ಯಪಾಲರ ಭೇಟಿಯನ್ನೂ ನಾಳೆ ಮಾಡುತ್ತಿದ್ದೇವೆ. ಇದ್ಯಾವುದೂ ಆಗದಿದ್ದರೆ ರಾಷ್ಟ್ರಪತಿಗಳ ಭೇಟಿಯೂ ಮಾಡುತ್ತೇವೆ" ಎಂದರು.
"ಇವತ್ತು ಬಿಎಸ್ವೈ ಅವರ ಪೋಕ್ಸೋ ಕೇಸ್ ವಿಚಾರಣೆ ಇದೆ. ನಮ್ಮ ವಕೀಲರು ವಿಚಾರಣೆಗೆ ಹೋಗುತ್ತಾರೆ. ಏನಾಗುತ್ತೆ ಅಂತ ನೋಡೋಣ. ಕೋರ್ಟ್ ತೀರ್ಪು ಏನು ಬರುತ್ತೆ ಅಂತ ನೋಡಿಕೊಂಡು ಮುಂದಿನ ಕ್ರಮ" ಎಂದು ತಿಳಿಸಿದರು.