ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV Bharat) ರಾಮನಗರ:ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೂರಕ್ಕೆ ನೂರು ಮುಖ್ಯಮಂತ್ರಿ ಆಗೇ ಆಗುತ್ತಾರೆ. ಹಿಂಬಾಗಿಲಿಂದ ರಾಜ್ಯದಲ್ಲಿ ಬಹಳಷ್ಟು ಜನ ಸಿಎಂ ಆಗಿ ಹೋಗಿದ್ದಾರೆ. ನಮ್ಮ ಜಿಲ್ಲೆಯವರು ಸಿಎಂ ಆಗಬೇಕು ಎಂಬ ಆಸೆ ನನಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ಜೂನ್ 3 ರಂದು ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಇದ್ದು, ಕಾಂಗ್ರೆಸ್ ಪಕ್ಷದಿಂದ ರಾಮೋಜಿ ಗೌಡರು ಅಭ್ಯರ್ಥಿಯಾಗಿದ್ದಾರೆ. ಸರ್ಕಾರ ಒಂದು ವರ್ಷ ಪೂರೈಸಿದ್ದು, ಐದು ಗ್ಯಾರಂಟಿ ಪೂರೈಸಿದೆ. ಜನಾಭಿಪ್ರಾಯದಲ್ಲಿ ಉತ್ತಮ ಸರ್ಕಾರ ಎಂಬ ಹೆಸರಿದೆ. ಈ ಸಲ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಕೂಡ 3 ಭಾರಿ ಜೆಡಿಎಸ್ ಪಕ್ಷದಿಂದ ಎಂಎಲ್ಸಿಯಾಗಿ, ಕಳೆದ ಭಾರಿ ಬಿಜೆಪಿಯಿಂದ ಶಿಕ್ಷಕರ ಪ್ರತಿನಿಧಿಯಾಗಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದೆನು. ಆದರೆ, ಬಿಜೆಪಿ ಸರ್ಕಾರದಲ್ಲಿ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಉಪಚುನಾವಣೆಯಲ್ಲಿ ಗೆದ್ದು ಈಗ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಉಪ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿಯನ್ನು ನನ್ನ ವಿರುದ್ದ ನಿಲ್ಲಿಸಿದ್ದರೂ ಕೂಡ ಶಿಕ್ಷಕರು ನನ್ನನ್ನು ಕೈ ಬಿಡದೇ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.
ಇನ್ನು ಸಾಕಷ್ಟು ಸಮಸ್ಯೆಗಳು ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಇವೆ. ಹಳೆ ಪಿಂಚಣಿಗಾಗಿ ಶಿಕ್ಷಕರು ನಿರಂತರವಾಗಿ ನೂರಾರು ದಿನಗಳ ಕಾಲ ಹೋರಾಟ ಮಾಡಿದ್ದರು. ಅದರಲ್ಲಿ ಮೂವರು ಶಿಕ್ಷಕರು ವಿಷ ಸೇವಿಸಿ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಮತ್ತೆ ಮೂವರು ಶಿಕ್ಷಕರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡು ಉಳಿದುಕೊಂಡರು. ಈ ಸಂಬಂಧ ಶಿಕ್ಷಕರ ಸಮಸ್ಯೆ ಬಗ್ಗೆ ಅಂದಿನ ಸಿಎಂ ಭೇಟಿ ಮಾಡಿದಾಗ ಸಮರ್ಪಕ ಉತ್ತರ ಸಿಗದೇ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಒಂದು ಸಭೆ ನಡೆಸಿ ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ನಾನು ಸಿಎಂ ಬಳಿ ಕೇಳಿಕೊಂಡಿದ್ದೆ, ಆದರೆ, ಶಿಕ್ಷಕರ ಸಮಸ್ಯೆ ಈಡೇರಿಸದೇ ಕೈ ಚಲ್ಲಿದರು ಎಂದು ಆರೋಪಿಸಿದರು.
ನಮ್ಮದೇ ಬಿಜೆಪಿ ಸರ್ಕಾರ ಇದ್ದರೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲವೆಂದು ನಾನು ಬಹಳ ಬೇಜಾರಿನಿಂದ ಇದ್ದೆ. ಅಂದೇ ನಾನು ಬಿಜೆಪಿ ಬಿಡುವ ತೀರ್ಮಾನ ತೆಗೆದುಕೊಂಡು. ಅಂದೇ ರಾತ್ರಿ ಮಧ್ಯ ರಾತ್ರಿ 2 ಗಂಟೆಗೆ ಡಿ ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದೆ. ಶಿವಕುಮಾರ್ ನನ್ನ ಭೇಟಿಗೆ ಸ್ಪಂದಿಸಿ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದರು. ಆಗ ಶಿಕ್ಷಕರು ತಮ್ಮ ಹೋರಾಟವನ್ನು ಹಿಂದಕ್ಕೆ ತೆಗೆದುಕೊಂಡಿದ್ದರು ಎಂದು ತಿಳಿಸಿದರು.
ಹಳೇ ಪಿಂಚಣಿ ಒಪಿಎಸ್ ಜಾರಿ:ಎನ್ಪಿಎಸ್ ಹಾಗೂ ಒಪಿಎಸ್ ಎರಡನ್ನು ಜಾರಿಗೆ ತಂದಿದ್ದು, ಹಾಗೆಯೇ ಒಪಿಎಸ್ ರದ್ದು ಮಾಡಿದ ಕ್ರೆಡಿಟ್ ಬಿಜೆಪಿ ಹೋಗುತ್ತದೆ. ಈಗಾಗಲೇ ನಮ್ಮ ಸರ್ಕಾರ ಹಳೇ ಪಿಂಚಣಿ ಒಪಿಎಸ್ ಜಾರಿ ಸಂಬಂಧಿಸಿದಂತೆ ಸಮಿತಿ ಕೂಡ ರಚನೆ ಮಾಡಿದ್ದು, ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಇದಕ್ಕೊಂದು ತಾತ್ವಿಕ ತೀರ್ಮಾನಕ್ಕೆ ಬರಲಾಗುವುದು. ಒಂದು ವೇಳೆ ಈ ಸರ್ಕಾರ ಕೂಡ ಶಿಕ್ಷಕರಿಗೆ ಸ್ಪಂದಿಸದಿದ್ದರೆ ನನ್ನ ಹೋರಾಟ ಮುಂದುವರೆಯಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಡಿಸಿಎಂ ಶಿವಕುಮಾರ್ ಸಿಎಂ ಆಗಬೇಕು:ಕೆಪಿಸಿಸಿ ಅಧ್ಯಕ್ಷರು ಡಿಸಿಎಂ ಡಿ ಕೆ ಶಿವಕುಮಾರ್ ನಮ್ಮ ಜಿಲ್ಲೆಯವರು. ಪಕ್ಷ ಅಧಿಕಾರಕ್ಕೆ ತರುವಲ್ಲಿ ಶಿವಕುಮಾರ್ ಪಾತ್ರ ಬಹಳಷ್ಟು ದೊಡ್ಡದಿದೆ. ಅದರು ಸಿಎಂ ಆಗಬೇಕು ಎಂಬುದು ನಮ್ಮ ಅಬಿಪ್ರಾಯ. ಈಗಲೇ ಅವರು ಸಿಎಂ ಆಗಲಿ ಎಂಬ ಆಸೆ ನನಗಿದೆ, ಆದರೆ ಅವರನ್ನು ಸಿಎಂ ಮಾಡೋದು ಹೈಕಮಾಂಡ್ ತೀರ್ಮಾನ ಎಂದು ಹೇಳಿದರು.
ರಾಮೋಜಿಗೌಡ ಗೆಲ್ಲುತ್ತಾರೆ:ನಮ್ಮ ಅಭ್ಯರ್ಥಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಇದುವರೆಗೂ 15 ಸಾವಿರಕ್ಕೂ ಹೆಚ್ಚು ಪದವೀಧರರಿಗೆ ಕೆಲಸ ಕೊಡಿಸುವ ಪ್ರಯತ್ನ ನಡೆಸಿದ್ದಾರೆ. ಸಾವಿರಾರು ಪದವೀಧರರಿಗೆ ಕೆಲಸ ಕೂಡ ಕೊಡಿಸಿದ್ದು, ನಿರಂತರವಾಗಿ ಶಿಕ್ಷಕರು ಹಾಗೂ ಪದವೀಧರರ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈ ಭಾರಿ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ:ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ: ಸಾಂಪ್ರದಾಯಿಕ ಉಡುಗೆಯೊಂದಿಗೆ ದೇವರ ದರ್ಶನ - CM DCM Visited Dharmasthala