ಬೆಂಗಳೂರು: ವೃಷಭಾವತಿ ವ್ಯಾಲಿ ಎರಡನೇ ಹಂತದ ಸಂಸ್ಕರಿಸಿದ ನೀರನ್ನು ತುಂಬಿಸುವ ಯೋಜನೆಯ ಮೊದಲ ಹಂತದ 1081 ಕೋಟಿ ಮೊತ್ತದ ಕಾಮಗಾರಿಗೆ ರಾಜ್ಯ ಸರ್ಕಾರ ನಾಳೆ (ಸೋಮವಾರ) ಶಂಕು ಸ್ಥಾಪನೆ ನೆರವೇರಿಸಲಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ದ್ವಿತೀಯ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಸಣ್ಣ ನೀರಾವರಿ ಇಲಾಖೆಯ ವತಿಯಿಂದ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ನೀರನ್ನು ಕೆರೆಗಳಿಗೆ ಹರಿಸಿ ಅಂತರ್ಜಲ ಅಭಿವೃದ್ಧಿಪಡಿಸುವ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದೆ. ಕೆ.ಸಿ ವ್ಯಾಲಿ ಯೋಜನೆ, ಹೆಚ್.ಎನ್. ವ್ಯಾಲಿ ಯೋಜನೆ, ಆನೇಕಲ್ ಏತ ನೀರಾವರಿ ಮತ್ತು ಇತರೆ ಯೋಜನೆಗಳಿಂದ ಸುಮಾರು 860 ಎಂ.ಎಲ್.ಡಿ ರಷ್ಟು ಪ್ರತಿನಿತ್ಯ ಯಶಸ್ವಿಯಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದ ಪರಿಣಾಮ, ಬೋರ್ವೆಲ್, ಬಾವಿ ಮತ್ತು ಇತರೆ ನೀರಿನ ಮೂಲಗಳು ಪುನಶ್ಚೇತನಗೊಂಡಿವೆ ಎಂದಿದ್ದಾರೆ.
ಕಳೆದ ಕೆಲ ದಶಕಗಳಿಂದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸತತ ಮಳೆಯ ವೈಫಲ್ಯದಿಂದಾಗಿ ನದಿಗಳು, ಕೆರೆಗಳು, ಹಳ್ಳ ಕೊಳ್ಳಗಳು ನೀರಿಲ್ಲದೆ ಬರಡಾಗಿವೆ. ಈ ಭಾಗದ ರೈತಾಪಿ ವರ್ಗದವರು ಬೇರೆ ಯಾವುದೇ ನೀರಿನ ಮೂಲಗಳು ಇಲ್ಲದೇ ಕೊಳವೆ ಬಾವಿಗಳನ್ನು ಅವಲಂಬಿಸಿರುತ್ತಾರೆ. ಆದರೆ, ಅತಿಯಾದ ಅಂತರ್ಜಲ ಬಳಕೆಯಿಂದ ಅಂತರ್ಜಲ ಮಟ್ಟವು ಅಂಕಿ ಅಂಶಗಳ ಅನ್ವಯ ಸುಮಾರು 1000-1200 ಅಡಿಗಳಷ್ಟು ಬಹುತೇಕ ಕುಸಿದಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಭೀಕರ ಬರ; 125ಕ್ಕೂ ಗ್ರಾಮಗಳಿಗೆ ಕುಡಿಯಲು ನೀರೊದಗಿಸುವ ಸೂಳೆಕೆರೆ ಒಡಲು ಖಾಲಿ ಖಾಲಿ!
ಈ ನಿಟ್ಟಿನಲ್ಲಿ ಅಂತರ್ಜಲ ವೃದ್ಧಿಗಾಗಿ ಸರ್ಕಾರ ಬೆಂಗಳೂರು ನಗರದ ವೃಷಭಾವತಿ ವ್ಯಾಲಿ ಕಣಿವೆಯ ಸಂಸ್ಕರಿಸಿದ ನೀರನ್ನು ಸುಮಾರು 1081 ಕೋಟಿ ವೆಚ್ಚದಲ್ಲಿ ಮೊದಲನೇ ಹಂತದಲ್ಲಿ 70 ಕೆರೆಗಳಿಗೆ ನೀರನ್ನು ತುಂಬಿಸಲು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಎರಡನೇ ಮತ್ತು ಮೂರನೇ ಹಂತದಲ್ಲಿ 189 ಕೆರೆಗಳನ್ನೊಳಗೊಂಡಂತೆ ಒಟ್ಟಾರೆಯಾಗಿ 259 ಕೆರೆಗಳಿಗೆ ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿ ನಗರ ಬಿ.ಡಬ್ಲೂ.ಎಸ್.ಎಸ್.ಬಿ ನಾಯಂಡಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ 243 ಎಂ.ಎಲ್.ಡಿ, ಮೈಲಸಂದ್ರದ ತ್ಯಾಜ್ಯ ಸಂಸ್ಕರಣಾ ಘಟಕದಿಂದ 65 ಎಂ.ಎಲ್.ಡಿ ಸೇರಿ ಒಟ್ಟು 308 ಎಂ.ಎಲ್.ಡಿ ನೀರನ್ನ ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಮೊದಲ ಹಂತದ ಯೋಜನೆ-1:ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 243 ಎಂ.ಎಲ್.ಡಿ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 70 ಕೆರೆಗಳಿಗೆ ತುಂಬಿಸುವ ಕಾಮಗಾರಿ ಇದಾಗಿದೆ. 15.06.2023 ರಂದು ನಡೆದ 2 ಸಚಿವ ಸಂಪುಟ ಸಭೆಯಲ್ಲೇ ಇದಕ್ಕೆ ಅನುಮೋದನೆ ನೀಡಲಾಗಿತ್ತು. 36 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, 2 ಲಿಫ್ಟ್‌ಗಳ ಮೂಲಕ 70 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಸದರಿ ಯೋಜನೆಯಿಂದ ಸಂಸ್ಕರಿಸಿದ ನೀರು ಮರುಬಳಕೆಗೆ ಅನುವು ಮಾಡಿಕೊಡುವುದಲ್ಲದೆ, ಅಂತರ್ಜಲ ವೃದ್ಧಿ ಮೊದಲ ಉದ್ದೇಶವಾಗಿದೆ. ತ್ಯಾಜ್ಯ ಕೊಳಚೆ ನೀರು ನೇರವಾಗಿ ಕೆರೆಗಳಿಗೆ-ನದಿ-ಕೊಳಗಳಿಗೆ ಹರಿಯವುದನ್ನ ತಡೆಗಟ್ಟುವ ಮೂಲಕ ಅವುಗಳ ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಸಚಿವ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕೊಳವೆ ಬಾವಿಯಿಂದ ನೀರು ಪೂರೈಸುವ ಟ್ಯಾಂಕರ್ಗಳು ಸರ್ಕಾರದ ಸುಪರ್ದಿಗೆ: ಡಿಸಿಎಂ ಡಿ.ಕೆ. ಶಿವಕುಮಾರ್