ಬೆಂಗಳೂರು: ಬಸ್ ಮತ್ತು ಟ್ರಕ್ ತಯಾರಿಕೆಗೆ ಹೆಸರಾಗಿರುವ ಸ್ವೀಡನ್ ಮೂಲದ ವೋಲ್ವೋ ಕಂಪೆನಿಯು ಹೊಸಕೋಟೆಯಲ್ಲಿರುವ ತನ್ನ ತಯಾರಿಕಾ ಸ್ಥಾವರವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 1,300ರಿಂದ 1,500 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತ ನಿವಾಸ ಕಾವೇರಿಯಲ್ಲಿ ಗುರುವಾರ ಒಡಂಬಡಿಕೆಗೆ ಅಂಕಿತ ಬಿದ್ದಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೂ ಈ ವೇಳೆ ಉಪಸ್ಥಿತರಿದ್ದರು. ಒಡಂಬಡಿಕೆಗೆ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವೋಲ್ವೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಸಹಿ ಹಾಕಿದರು.
ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಿ: ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, "ವೋಲ್ವೋ ಕಂಪೆನಿಯು 25 ವರ್ಷಗಳ ಹಿಂದೆಯೇ ರಾಜ್ಯಕ್ಕೆ ಬಂದು, ಬಂಡವಾಳ ಹೂಡಿ, ಬದಲಾವಣೆಗೆ ನಾಂದಿ ಹಾಡಿತ್ತು. ಈಗ ನಮ್ಮಲ್ಲಿ ವೋಲ್ವೋ ಎನ್ನುವುದು ಉತ್ಕೃಷ್ಟ ಗುಣಮಟ್ಟದ ಬಸ್ಸುಗಳಿಗೆ ಇನ್ನೊಂದು ಹೆಸರಾಗಿದೆ. ರಾಜ್ಯ ಸಾರಿಗೆ ನಿಗಮದ ಐಷಾರಾಮಿ ಬಸ್ಸುಗಳನ್ನು ಕೂಡ ಜನ ಇದೇ ಹೆಸರಿನಿಂದ ಕರೆಯುತ್ತಿದ್ದಾರೆ. ವೋಲ್ವೋ ಕಂಪೆನಿಗೆ ಸರಕಾರ ಅಗತ್ಯ ಸೌಲಭ್ಯ ಮತ್ತು ನೆರವು ಒದಗಿಸಲಿದೆ. ಕಂಪೆನಿಯು ತನ್ನಲ್ಲಿ ಹೆಚ್ಚಿನ ಕನ್ನಡಿಗರಿಗೆ ಕೆಲಸ ಕೊಡಬೇಕು. ಇದರಿಂದ ಸ್ಥಳೀಯರಿಗೆ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಸಾಧಿಸಬಹುದು" ಎಂದರು.