ಮಂಗಳೂರು (ದಕ್ಷಿಣ ಕನ್ನಡ) : ಭಾರಿ ಮಳೆಯ ಹಿನ್ನೆಲೆ ಶಿರಾಡಿ ಘಾಟ್‌ನ ಸಕಲೇಶಪುರದ ದೊಡ್ಡತಪ್ಪಲುವಿನಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಹೀಗಾಗಿ ಸಂಪಾಜೆ ಘಾಟಿಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಮಂಗಳೂರಿನಿಂದ ರಾಜಧಾನಿಗೆ ಪ್ರಯಾಣ ಬೆಳೆಸಲು ಚಾರ್ಮಾಡಿ ಘಾಟ್ ಮಾತ್ರ ಉಳಿದಿದೆ. ಇದು ಪ್ರಯಾಣಿಕರು ಹಾಗೂ ವಾಹನ ಚಾಲಕರಿಗೆ ದೊಡ್ಡ ತೊಂದರೆ ಉಂಟುಮಾಡಿದೆ.
ಈ ನಿರ್ಣಯದ ನಂತರ ಚಾರ್ಮಾಡಿ ಘಾಟ್ ಮೂಲಕ ಪ್ರಯಾಣಿಸುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಟ್ರಾಫಿಕ್ ಪ್ರಮಾಣ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ತೆರಳುವ ಹಾಗೂ ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಬಹುತೇಕ ವಾಹನಗಳು ಶಿರಾಡಿ ಘಾಟ್ ಮೂಲಕವೇ ಸಾಗುತ್ತಿದ್ದವು. ಕೆಎಸ್‌ಆರ್‌ಟಿಸಿಯ 150ಕ್ಕೂ ಹೆಚ್ಚು ಬಸ್‌ಗಳು ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು.
ಚಾರ್ಮಾಡಿ ಘಾಟಿಯ ರಸ್ತೆ ಅಗಲ ಕಿರಿದಾಗಿದೆ ಹಾಗೂ ಕಡಿದಾದ ತಿರುವುಗಳಿಂದ ಕೂಡಿದೆ. ಇದರಿಂದ ಕೆಎಸ್‌ಆರ್‌ಟಿಸಿಯ ವೊಲ್ವೋ ಮತ್ತು ಎಸಿ ಸ್ಲೀಪರ್ ಬಸ್‌ಗಳು ಸಂಚರಿಸುವುದು ಕಷ್ಟ. ಬೆಂಗಳೂರಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ನಿತ್ಯ ಇಂತಹ 30 ಬಸ್‌ಗಳು ಸೇವೆ ಒದಗಿಸುತ್ತಿವೆ. ಬೆಂಗಳೂರಿನಿಂದ 30 ಬಸ್‌ಗಳು ಜಿಲ್ಲೆಗೆ ಬರುತ್ತವೆ. ಹಾಗಾಗಿ ಚಾರ್ಮಾಡಿಯಲ್ಲಿ ವೋಲ್ವೋ ಹಾಗೂ ಎಸಿ ಸ್ಲೀಪರ್ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿದೆ.