ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದ ತನಿಖೆ ನಡೆಸಿರುವ ಎಸ್‌ಐಟಿ ಪ್ರಕರಣ ಸಂಬಂಧ ಹಲವು ಮಹತ್ವದ ಸಾಕ್ಷ್ಯ ಕಲೆ ಹಾಕಿದೆ. ಇದೀಗ 700ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಆರಂಭದಲ್ಲಿ 18 ಖಾತೆಗಳಿಗೆ ಮಾತ್ರ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ಕಂಡು ಬಂದಿತ್ತು. ಆದರೆ, ಈಗ ನೂರಾರು ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ.
"ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ– ಆಪರೇಟಿವ್ ಸೊಸೈಟಿಯ (ಎಫ್‌ಎಫ್‌ಸಿಸಿಎಸ್‌ಎಲ್) ವಿವಿಧ ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ₹94.73 ಕೋಟಿ ರೂ. ಹಣ ವರ್ಗಾವಣೆ ಆಗಿತ್ತು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದ್ದು, 700ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಇದು ತನಿಖೆಯಿಂದ ದೃಢಪಟ್ಟಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಬಂಧಿತ ಆರೋಪಿ ಸತ್ಯನಾರಾಯಣ ವರ್ಮ, ಅವರೇ ಪ್ರಕರಣದ ಕಿಂಗ್‌ಪಿನ್ ಎನ್ನಲಾಗಿದೆ. ವರ್ಮ ಅವರ ಸಹಚರ ಸಾಯಿತೇಜ್ ಎಂಬುವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಇಬ್ಬರು ಹೊಸ ಬ್ಯಾಂಕ್ ತೆರೆಯುವುದು, ಹಣ ವರ್ಗಾವಣೆ ಮಾಡುವ ಕೃತ್ಯ ಎಸಗಿದ್ದರು. ದನ ಕಾಯುವವರು, ಕುರಿ ಮೇಯಿಸೋನು, ಗೊತ್ತು ಗುರಿ ಇಲ್ಲದೇ ಇರುವ ಹಲವರ ಖಾತೆಗೆ ಹಣ ಹಾಕಲಾಗಿದೆ ಎಂದು ತಿಳಿದು ಬಂದಿದೆ. 5 ಲಕ್ಷ ರೂ.ದಿಂದ 2 ಕೋಟಿ ರೂ.ವರೆಗೂ ಒಂದೊಂದು ಅಕೌಂಟ್ಗೆ ಹಣ ವರ್ಗಾವಣೆ ಆಗಿದೆ" ಎಂದು ಮೂಲಗಳು ಹೇಳಿವೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ನಿಗಮದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫಿ ನೇತೃತ್ವದ ತಂಡದಿಂದ ತನಿಖೆ ನಡೆಯುತ್ತಿದೆ. ಚಂದ್ರಶೇಖರನ್ ಬರೆದಿದ್ದ ಡೆತ್‌ನೋಟ್‌ನಲ್ಲಿ ಸತ್ಯನಾರಾಯಣ ವರ್ಮ, ಸಾಯಿತೇಜ್ ಹೆಸರನ್ನು ಉಲ್ಲೇಖಿಸಲಾಗಿತ್ತು. ಸದ್ಯ ಸಾಯಿತೇಜ್‌ನನ್ನು ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿದೆ.
ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ: ಎಸ್ಐಟಿಯಿಂದ ಮತ್ತೋರ್ವ ಆರೋಪಿ ಬಂಧನ - VALMIKI NIGAM SCAM