ಬೆಂಗಳೂರು:''ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಸಿಲುಕಿಸಲು ಕೇಂದ್ರ ತನಿಖಾ ಸಂಸ್ಥೆಗಳು, ಕೆಲವರನ್ನು ಬಂಧಿಸುವುದಕ್ಕೆ ಪಿತೂರಿ ಮಾಡುತ್ತಿದ್ದು, ಇಡೀ ಸರ್ಕಾರವನ್ನೇ ಗುರಿಪಡಿಸುತ್ತಿವೆ'' ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ನಲ್ಲಿ ದೂರಿತು.
ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ನಿಗಮದ ಅಧಿಕಾರಿಗಳಿಗೆ ಒತ್ತಡ ಹೇರಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಪೀಠಕ್ಕೆ ಈ ವಿಚಾರವನ್ನು ವಿವರಿಸಿದರು.
ಹಗರಣ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಪ್ರಕರಣ ದಾಖಲಿಸಿ ಬಹುತೇಕ ತನಿಖೆ ಪೂರ್ಣಗೊಳಿಸಿದೆ. ಈ ನಡುವೆ ಸಿಬಿಐ ಪ್ರಕರಣ ದಾಖಲಿಸಿದ್ದು, ಈವರೆಗೂ ವಿಚಾರಣೆ ಪ್ರಾರಂಭಿಸಿಲ್ಲ. ಏತನ್ಮಧ್ಯೆ ಇಡಿ ಅಧಿಕಾರಿಗಳು ಇಸಿಐಆರ್ ಪ್ರಕರಣ ದಾಖಲಿಸಿದ್ದಾರೆ. ಮಾಜಿ ಸಚಿವರೊಬ್ಬರನ್ನು ಬಂಧಿಸಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಗೆ ಕರೆದಿದ್ದ ನಿಗಮದ ಹೆಚ್ಚುವರಿ ನಿರ್ದೇಶಕರಿಗೆ ಮುಖ್ಯಮಂತ್ರಿ ಹೆಸರನ್ನು ಹೇಳುವಂತೆ ಒತ್ತಡ ಹಾಕಿದ್ದಾರೆ. ಮುಖ್ಯಮಂತ್ರಿ ಹೆಸರು ಹೇಳದಿದ್ದರೆ ಕಚೇರಿಯಿಂದ ಹೊರಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಘಟನೆಯ ಹಿಂದೆ ದೊಡ್ಡ ಸಂದೇಶವಿದೆ.
ಅಲ್ಲದೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಇಡಿ ಅಧಿಕಾರಿಗಳು ಪ್ರಾಮಾಣಿಕರಲ್ಲ. ಒಬ್ಬ ಅಧಿಕಾರಿಯ ವಿರುದ್ಧ ತನ್ನ ಕರ್ತವ್ಯ ನಿರ್ವಹಣೆ ಮಾಡಲು 5 ಲಕ್ಷ ಲಂಚ ಕೇಳಿರುವ ಆರೋಪದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಹೀಗಾಗಿ ಅವರ ವಿರುದ್ಧ ತನಿಖೆಗೆ ತಡೆ ನೀಡಬಾರದು. ತನಿಖೆ ಮುಂದುವರೆದಲ್ಲಿ ಮಾತ್ರ ಸತ್ಯಾಂಶ ಹೊರ ಬರಲಿದೆ ಎಂದು ಮನವಿ ಮಾಡಿದರು..
ಈ ವೇಳೆ ನ್ಯಾಯಪೀಠ, ತನಿಖಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದಲ್ಲಿ ತನಿಖೆ ಹೇಗೆ ಮುಂದುವರೆಸಲು ಸಾಧ್ಯ ಎಂದು ಪ್ರಶ್ನಿಸಿತು. ಅಲ್ಲದೆ, ತನಿಖಾಧಿಕಾರಿಗಳ ವಿರುದ್ಧ ದೂರು ದಾಖಲಿಸುತ್ತಿದ್ದರೆ ಯಾವುದೇ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದಿತು.
ಇದಕ್ಕೆ ಅಡ್ವೋಕೇಟ್ ಜನರಲ್, ಈ ರೀತಿಯ ತರ್ಕ ಪ್ರಸ್ತುತದ ಪ್ರಕರಣದಲ್ಲಿ ಅನುಸರಿಸಲಾಗುವುದಿಲ್ಲ. ಈಗಾಗಲೇ ಮಾಜಿ ಸಚಿವರೊಬ್ಬರನ್ನು ಬಂಧಿಸಲಾಗಿದೆ. ತನಿಖಾಧಿಕಾರಿಗಳ ವಿರುದ್ಧ ಆರೋಪವಿಲ್ಲ ಎಂದಾದರೆರೆ, ದೂರುದಾರ ಕಲ್ಲೇಶ್ ಅವರನ್ನು ವಿಚಾರಣೆ ನಡೆಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಹಾಜರುಪಡಿಸಬೇಕು ಎಂದು ಕೋರಿದರು. ಯಾವ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗಿದೆ ಎಂಬ ಅಂಶ ತಿಳಿಯಬೇಕಾಗಿದೆ. ಹೀಗಾಗಿ ತನಿಖೆ ಸ್ಥಗಿತಗೊಳಿಸುವುದಕ್ಕೆ ಅವಕಾಶ ನೀಡಬಾರದು ಎಂದು ಕೋರಿದರು. ಅಲ್ಲದೆ, ಪೊಲೀಸ್ ಅಧಿಕಾರಿ ತನಿಖೆ ಸಂದರ್ಭದಲ್ಲಿ ಏನು ಬೇಕಾದರೂ ಮಾಡಬಹುದು ಅಂತಿದೆಯೇ ಎಂದು ಪ್ರಶ್ನಿಸಿದರು.