ಬೆಳಗಾವಿ : ಕಾಂಗ್ರೆಸ್ ಪಕ್ಷಕ್ಕೆ ಹೋದ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಡಿಎನ್ಎ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದು, ಪರಮ ಭ್ರಷ್ಟರಾಗಿ ಹೊರಹೊಮ್ಮಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇರ ಹಸ್ತಕ್ಷೇಪ ಮತ್ತು ಆಶೀರ್ವಾದದಿಂದ ವಾಲ್ಮೀಕಿ ನಿಗಮ ಮತ್ತು ಮುಡಾ ಎರಡೂ ಹಗರಣಗಳು ನಡೆದಿವೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿಬಿಐ ತನಿಖೆ ಎದುರಿಸಬೇಕು. ಶುದ್ಧಹಸ್ತರಾದರೆ ಮತ್ತೆ ಅವರನ್ನೇ ಬೇಕಾದರೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.
ಪೂರ್ವಾಲೋಚನೆ ಇಲ್ಲದೇ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಸುಳ್ಳು ಭರವಸೆ, ಗ್ಯಾರಂಟಿ ಕೊಟ್ಟು ಪರದಾಡುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಕಾಂಗ್ರೆಸ್ ಡಿಎನ್ಎದಲ್ಲಿ ಭ್ರಷ್ಟಾಚಾರವಿದೆ. ದೇಶದಲ್ಲಿ ಭ್ರಷ್ಟಾಚಾರವನ್ನು ರಕ್ತ ಬೀಜಾಸುರನಂತ ವ್ಯವಸ್ಥೆ ಸೃಷ್ಟಿಸಿದ್ದಾರೆ. ಭ್ರಷ್ಟಾಚಾರ ಎನ್ನುವ ಲಕ್ಷಾಂತರ ಮೊಟ್ಟೆಗಳನ್ನು ಇಟ್ಟು ಅದಕ್ಕೆ ಸದಾಕಾಲ ಕಾವು ಕೊಟ್ಟು ಬಂದಿದ್ದು ಕಾಂಗ್ರೆಸ್ ಪಕ್ಷ. ಜವಾಹರಲಾಲ್ ನೆಹರು ಕಾಲದಿಂದ ಹಿಡಿದು ಕಾಂಗ್ರೆಸ್ನ ಎಲ್ಲಾ ಪ್ರಧಾನಮಂತ್ರಿಗಳ ಕಾಲದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರಗಳು, ಹಗರಣಗಳು ನಡೆದಿವೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
ಈಗ ಸಿದ್ದರಾಮಯ್ಯ ನೇತೃತ್ವದಲ್ಲಿ 189 ಕೋಟಿ ರೂ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ. ಸಿದ್ದರಾಮಯ್ಯನವರು ಅತ್ಯಂತ ಬಾಲಿಶವಾಗಿ ಮತ್ತು ನಿರ್ಲಜ್ಜತನದಿಂದ ತಮ್ಮನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಅಧಿಕಾರಿಗಳಿಂದ ಆಗಿದ್ದು ಎಂದಾದರೆ ನಾಗೇಂದ್ರ ಅವರನ್ನು ಏಕೆ ರಾಜೀನಾಮೆ ಕೊಡಿಸಿದಿರಿ? ಎಸ್ಐಟಿ ಅವರನ್ನು ಏಕೆ ಕರೆಸಿತ್ತು. ಕರೆಸಿ ಏನೂ ಮಾಡಿಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ, ಈ ಡ್ರಾಮಾ ಏಕೆ ಮಾಡಿದಿರಿ? ಎಂದು ಪ್ರಲ್ಹಾದ್ ಜೋಶಿ ಕುಟುಕಿದರು.