ಮಂಡ್ಯ:ಬೆಳಗಾವಿಯಲ್ಲಿ ಜನರ ತೆರಿಗೆ ದುಡ್ಡಿನಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹರಿಹಾಯ್ದರು.
ನಗರದಲ್ಲಿಂದುನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಗಾಂಧಿ ಶತಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ವರ್ಷ ಗಾಂಧಿ ಹೆಸರಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಹೊರಟಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಮಾಡುತ್ತಿದೆ. ಆದರೆ, ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋ ಬದಲಿಗೆ ನಕಲಿ ಗಾಂಧಿಗಳ ಫೋಟೋಗಳಿರುವ ಕಟೌಟ್‌ಗಳನ್ನು ಆಕಾಶದೆತ್ತರಕ್ಕೆ ಹಾಕಲಾಗಿದೆ ಎಂದು ಅವರು ಕಿಡಿಕಾರಿದರು.
ಈಗಿರುವುದು ಅಸಲಿ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್. ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಅದೇ ನಕಲಿ ಕಾಂಗ್ರೆಸ್. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸುವಂತೆ ಸ್ವತಃ ಗಾಂಧೀಜಿ ಅವರು ಆಗಲೇ ಹೇಳಿದ್ದರು. ಅವರ ಕಾಂಗ್ರೆಸ್ ಈಗಿಲ್ಲ ಎಂದು ಟೀಕಿಸಿದರು.
ಗಾಂಧೀಜಿ ಅವರ ಹೆಸರಲ್ಲಿ ಕಾರ್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಸಂಘಟಿತ ಹೋರಾಟದ ಮೂಲಕ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟರು ಅವರು. ಗಾಂಧೀಜಿ ಅವರ ರಾಮರಾಜ್ಯದ ಪರಿಕಲ್ಪನೆ ಇವತ್ತು ರಾಜ್ಯದಲ್ಲಿ ಸಾಕಾರ ಆಗಿದೆಯಾ? ಅವರ ಗ್ರಾಮ ಸ್ವರಾಜ್ಯದ ಕನಸು ಈಡೇರಿದೆಯಾ? 15ನೇ ಹಣಕಾಸು ಆಯೋಗದ ಅನುದಾನದ ಮೂಲಕ ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹448.29 ಕೋಟಿ ಬಳಕೆ ಮಾಡಿಲ್ಲ. ಈ ಹಣ ಬಿಡುಗಡೆಯಾಗಿ ಹಲವಾರು ತಿಂಗಳೇ ಕಳೆದಿದ್ದರೂ ಇನ್ನೂ ಪಂಚಾಯತಿಗಳಿಗೆ ಆ ಹಣ ಹೋಗಿಲ್ಲ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.