ಶಿವಮೊಗ್ಗ : ಮೈಸೂರು ಮಹಾರಾಜರಿಂದ, ವಿಶ್ವೇಶ್ವರಯ್ಯನವರ ಪ್ಲಾನ್ನಿಂದ ಪ್ರಾರಂಭವಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಭಾನುವಾರ ಭದ್ರಾವತಿಯ ಕಾರ್ಖಾನೆಗೆ ಅವರು ಭೇಟಿ ನೀಡಿದ್ದರು. ಕಾರ್ಖಾನೆಯ ಒಳ ಭಾಗದಲ್ಲಿ ಇರುವ ಸರ್ ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಗೆ ಪೂಜೆ ಸಲ್ಲಿಸಿ, ಹಾರ ಹಾಕಿ, ನಂತರ ಕಾರ್ಖಾನೆಯ ವಸ್ತು ಸ್ಥಿತಿಯನ್ನು ಅವಲೋಕಿಸಿದರು. ನಂತರ ಸೈಲ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಭದ್ರಾವತಿಯ VISL ಕಾರ್ಖಾನೆಯನ್ನು ಉಳಿಸಬೇಕೆಂಬುದು ಎಲ್ಲರ ಭಾವನೆ. ಹೀಗಾಗಿ ಕಾರ್ಖಾನೆಯ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕೆಂದೇ ನಾನು ಮತ್ತು ಸೈಲ್ನ ಅಧ್ಯಕ್ಷರಾದ ಅಮರೇಂದ್ರ ಪ್ರಕಾಶ್ ಅವರಿಂದ ಮಾಹಿತಿ ಪಡೆದಿದ್ದೇವೆ. ಕಾರ್ಖಾನೆಯ ಆಡಳಿತ ವರ್ಗ ಹಾಗೂ ಕಾರ್ಮಿಕರು ಅವರ ಅನುಭವದ ಮಾಹಿತಿಯನ್ನು ಕೊಟ್ಟಿದ್ದಾರೆ. ಯಾವ ರೀತಿ ಕಾರ್ಖಾನೆಯನ್ನು ಮುಂದಿನ ದಿನಗಳಲ್ಲಿ ಪುನಶ್ಚೇತನಗೊಳಿಸಬಹುದು ಎಂಬ ಮಾಹಿತಿಯನ್ನು ಪಡೆದಿದ್ದೇನೆ ಎಂದರು.
ಈಗ ಕೇಂದ್ರದಲ್ಲಿ ಲೋಕಸಭೆಯ ಕಲಾಪಗಳು ನಡೆಯುತ್ತಿವೆ. ಇದರಿಂದ ಕೆಲವು ನಿರ್ಧಾರಗಳನ್ನು ನಾವು ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಿಲ್ಲ. ರಾಜ್ಯಸಭಾ ಸದಸ್ಯರಾದ ಜಯರಾಂ ರಮೇಶ್ ಅವರು ನಾನು ಅಧಿಕಾರ ವಹಿಸಿಕೊಂಡಾಗ ನನ್ನ ಮುಂದೆ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆ ಹಿನ್ನೆಲೆ ನಾನು ಮಾಹಿತಿ ಪಡೆಯಲು ಭದ್ರಾವತಿಗೆ ಬಂದಿದ್ದೇನೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕಾರ್ಖಾನೆಯ ವಿಷಯದಲ್ಲಿ ಏನು ತೀರ್ಮಾನ ಆಗಬಹುದು, ಎಲ್ಲಾ ರೀತಿಯ ಸಾಧಕ- ಬಾಧಕಗಳು, ಕಾರ್ಮಿಕರ ಬದುಕು ಏನಿದೆ, ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಇರುವ ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಏನ್ ಮಾಡಬಹುದು ಎಂಬುದರ ಬಗ್ಗೆ ಸದ್ಯದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಿದ್ದೇನೆ ಎಂದು ತಿಳಿಸಿದರು.
ಕಾರ್ಖಾನೆಯ ವಿಷಯವನ್ನು ಬಜೆಟ್ನಲ್ಲಿ ತರುವ ಅವಶ್ಯಕತೆ ಇಲ್ಲ. ಕಾರ್ಖಾನೆಯನ್ನು 1998 ರಲ್ಲಿ ಸೈಲ್ಗೆ ಸೇರಿಸಲಾಗಿದೆ. ಪ್ರಧಾನ ಮಂತ್ರಿಗಳು ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾದಲ್ಲಿ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. 2030ಕ್ಕೆ ನಮ್ಮ ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣವನ್ನು ಉತ್ಪಾದನೆ ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ. ಈ ಗುರಿಯನ್ನು ತಲುಪಲು ಏನ್ ಕಾರ್ಯಕ್ರಮ ಮಾಡಬಹುದು ಎಂಬುದನ್ನು ಚಿಂತಿಸಲಾಗುತ್ತಿದೆ ಎಂದು ಹೇಳಿದ್ದಾರೆ.