ಬೆಂಗಳೂರು:ಮೂಗಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಚಿಕಿತ್ಸೆ ಪಡೆದ ನಂತರ ಜೆಪಿ ನಗರದ ತಮ್ಮ ನಿವಾಸಕ್ಕೆ ವಾಪಸಾದರು.
ನಗರದ ಖಾಸಗಿ ಹೋಟೆಲ್ನಲ್ಲಿ ಜೆಡಿಎಸ್ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಸಚಿವರಿಗೆ ಮೂಗಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಸಚಿವರನ್ನು ವೈದ್ಯರು ಕೆಲ ಗಂಟೆಗಳ ಕಾಲ ನಿಗಾದಲ್ಲಿ ಇರಿಸಿ ಅವಲೋಕನ ಮಾಡಿದರು. ಬಳಿಕ ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಮನೆಗೆ ಕಳಿಸಿಕೊಟ್ಟರು.
ಯಾರಿಗೂ ಆತಂಕ ಬೇಡ:ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ನಿವಾಸಕ್ಕೆ ಹೊರಡುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ''ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನಮ್ಮ ಕಾರ್ಯಕರ್ತರು ಅಭಿಮಾನಿಗಳಿಗೆ ಮನವಿ ಮಾಡುವುದು ಇಷ್ಟೇ. ನಿಮ್ಮಗಳ ಶುಭ ಹಾರೈಕೆ, ಭಗವಂತನ ಕೃಪೆ ಹಾಗೂ ತಂದೆ - ತಾಯಿ ಆಶೀರ್ವಾದ ಇರುವವರೆಗೆ ಯಾವುದೇ ಅಪಾಯವಿಲ್ಲ'' ಎಂದರು.
''ಮೂರು ಬಾರಿ ನನಗೆ ಹೃದಯ ಕವಾಟನ್ನು ಬದಲಾವಣೆ ಮಾಡಲಾಗಿದೆ. ಬ್ಲಡ್ ತಿನ್ನರ್ ಮಾತ್ರೆ ತೆಗೆದುಕೊಳ್ಳುತ್ತೇನೆ. ರಕ್ತ ಗಟ್ಟಿ ಆಗಬಾರದು ಎನ್ನುವ ಕಾರಣಕ್ಕೆ ಈ ಮಾತ್ರೆ ಸೇವಿಸುತ್ತೇನೆ. ಒತ್ತಡ ಜಾಸ್ತಿಯಾದಾಗ, ವಿಶ್ರಾಂತಿ ಇಲ್ಲದೆ ಇದ್ದಾಗ ನನಗೆ ಮೂಗಿನಿಂದ ರಕ್ತಸ್ರಾವ ಆಗುವುದು ಸಹಜ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನನಗೆ ಸಿಕ್ಕಿರುವ ಸಮಯ ಒಂದೊಂದು ಕ್ಷಣವು ಮುಖ್ಯ. ಜನರಿಗೆ ಎನಾದರೂ ಒಂದು ಸಹಾಯ ಮಾಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಕೊಡುಗೆ ಕೊಡಬೇಕು'' ಎಂದು ತಿಳಿಸಿದರು.