ಬೆಂಗಳೂರು/ಬೆಳಗಾವಿ:ಕೃಷ್ಣಾ ಮೇಲ್ದಂಡೆ ನದಿ ಪಾತ್ರದ ಆಲಮಟ್ಟಿ ಅಣೆಕಟ್ಟೆಯ ಎತ್ತರದಿಂದ ಮುಳುಗಡೆಯಾಗುವ 75 ಸಾವಿರ ಎಕರೆ ಜಮೀನಿನ ರೈತರಿಗೆ ಏಕರೂಪದಲ್ಲಿ ಪರಿಹಾರ ಪಾವತಿಸಲು ಮುಖ್ಯಮಂತ್ರಿಯವರು ನಿರ್ಣಯಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಸದನದಲ್ಲಿ ಇಂದು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಳುಗಡೆ ಪ್ರದೇಶಕ್ಕೆ ಎರಡು ಕಂತಿನಲ್ಲಿ ಪರಿಹಾರ ಪಾವತಿಸಲು ಈ ಸರ್ಕಾರ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು. ಆಗ ಮಧ್ಯಪ್ರವೇಶಿಸಿದ ಸಚಿವರು, ಇದು ತಪ್ಪು ಕಲ್ಪನೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2 ಕಂತಿನ ಪರಿಹಾರ ಪಾವತಿಸುವ ನಿರ್ಣಯ ಕೈಗೊಂಡು ಆದೇಶವು ಜಾರಿಯಾಗಿದೆ. ಆದರೆ ನಮ್ಮ ಸರ್ಕಾರದಲ್ಲಿ ಅದರ ಮುಂದುವರೆದ ಸಂಪರ್ಕದ ಪತ್ರಗಳು ರವಾನೆಯಾಗಿವೆ. ಇದು ನಮ್ಮ ಸರ್ಕಾರ ಕೈಗೊಂಡ ನಿರ್ಣಯವಲ್ಲ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಆಲಮಟ್ಟಿ ಎತ್ತರ ಸೇರಿದಂತೆ ಹಲವು ಕಾಮಗಾರಿಗಳಿಗೆ 1.50 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಪದೇಪದೇ ಹೇಳುವ ಮೂಲಕ ಆ ಯೋಜನೆಯನ್ನು ಮುಟ್ಟಲು ಹೆದರುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಆಕ್ಷೇಪಿಸಿದರು.