ಬೆಂಗಳೂರು:ಕ್ಯಾಂಟರ್ ಚಾಲಕನ ಅಜಾಗರೂಕತೆಗೆ ಎರಡು ಜೀವ ಬಲಿಯಾಗಿರುವ ದಾರುಣ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಶನಿವಾರ) ಬೆಳಗ್ಗೆ ನಡೆದಿದೆ. ಶಾಹಿಬ್ ರಾಝಾ (21), ರೆಹಾನ್ ರಾಝಾ (14) ಸಾವನ್ನಪ್ಪಿದ ದುರ್ದೈವಿಗಳು. ಇಬ್ಬರು ಬನಾರಸ್ ಮೂಲದವರಾಗಿದ್ದು, ಈ ಸಂಬಂಧ ಕ್ಯಾಂಟರ್ ಚಾಲಕ ಸುರೇಶ್ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದು ಸ್ಯಾಟಲೈಟ್ ಸಮೀಪದ ಹೊಸಗುಡ್ಡದಹಳ್ಳಿ ಸಮೀಪ ಬೆಳಗ್ಗೆ 8.28ರ ವೇಳೆ ಬೈಕ್ನಲ್ಲಿ ಬನಾರಸ್ ಮೂಲದ 21 ವರ್ಷದ ಶಾಹಿಬ್ ರಾಝಾ ಮತ್ತು 6ನೇ ತರಗತಿ ವಿದ್ಯಾರ್ಥಿ 14 ವರ್ಷದ ರೆಹಾನ್ ರಾಝಾ ಎಂಬ ಬಾಲಕ ಇಬ್ಬರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಹಾಲೋಬ್ಲಾಕ್ ತುಂಬಿದ್ದ ಕ್ಯಾಂಟರ್ ವಾಹನ ತಗ್ಗು ಪ್ರದೇಶದಲ್ಲಿ ನಿಲ್ಲಿಸಿದ್ದರಿಂದ ಏಕಾಏಕಿ ಚಲಿಸಿದ್ದು, ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಈ ವೇಳೆ ಇಬ್ಬರು ಬೈಕ್ನಿಂದ ಕೆಳಗೆ ಬಿದ್ದಿದ್ದು, ಟೈರ್ ಅಡಿಯಲ್ಲಿ ಸಿಲುಕಿದ್ರೆ ಸುಮಾರು 150 ರಿಂದ 200 ಮೀಟರ್ ಇಬ್ಬರನ್ನು ಕ್ಯಾಂಟರ್ ಎಳೆದೊಯ್ದಿದೆ. ಇಬ್ಬರು ಹಿಂಬದಿ ಟೈರ್ಗೆ ಸಿಲುಕಿ ಮೃತಪಟ್ಟಿದ್ದಾರೆ. ಇದಲ್ಲದೆ ರಸ್ತೆ ಬದಿ ನಿಲ್ಲಿಸಿದ್ದ 7 ಬೈಕ್ ಹಾಗೂ 2 ಕಾರು ಘಟನೆಯಲ್ಲಿ ಜಖಂ ಆಗಿವೆ. ಬೈಕ್ ಮುಂಬದಿಗೆ ಸಿಲುಕಿರಲಿಲ್ಲ ಅಂದಿದ್ರೆ ಕ್ಯಾಂಟರ್ ಮತ್ತಷ್ಟು ಮುಂದಕ್ಕೆ ಹೋಗಿ ಭಾರೀ ಅನಾಹುತವೇ ನಡೆದುಹೋಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.