ಹುಬ್ಬಳ್ಳಿ : ಭಾರತದಲ್ಲೇ ಪ್ರಥಮ ಬಾರಿಗೆ ಶ್ರೀಗಳನ್ನು ಒಳಗೊಂಡಂತೆ ಆನೆ, ಅಂಬಾರಿ ಸಹಿತ ಬೃಹತ್ ತುಲಾಭಾರಕ್ಕೆ ಹುಬ್ಬಳ್ಳಿ ನೆಹರೂ ಮೈದಾನ ಸಿದ್ದಗೊಂಡಿದೆ. ಇದು ಐತಿಹಾಸಿಕ ದಾಖಲೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನದ ಹಿರಿಯ ಪೀಠಾಧಿಪತಿ ಜ. ಫಕೀರ ಸಿದ್ದರಾಮ ಸ್ವಾಮೀಜಿ ಅಮೃತ ಮಹೋತ್ಸವದ ಅಂಗವಾಗಿ ಫೆಬ್ರವರಿ 1ರಂದು ಈ ತುಲಾಭಾರವನ್ನು ಆಯೋಜಿಸಲಾಗಿದೆ. ತುಲಾಭಾರಕ್ಕೆ 22 ಲಕ್ಷ ರೂ. ವೆಚ್ಚದಲ್ಲಿ 40 ಅಡಿ ಉದ್ದ, 30 ಅಡಿ ಎತ್ತರ ಹಾಗೂ 20 ಅಡಿ ಅಗಲ ಇರುವ ಕಬ್ಬಿಣದ ಬೃಹದಾಕಾರದ ತಕ್ಕಡಿಯನ್ನು ಸಿದ್ಧಪಡಿಸಲಾಗಿದೆ. ರಾಯಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದು ಈ ಬೃಹದಾಕಾರದ ತಕ್ಕಡಿಯನ್ನು ತಯಾರಿಸಿದೆ. ಇದು 25 ಟನ್ ತೂಗುವ ಸಾಮರ್ಥ್ಯ ಹೊಂದಿರುವುದು ಮತ್ತೊಂದು ವಿಶೇಷ.
ಬೃಹತ್ ತುಲಾಭಾರಕ್ಕೆ ಹುಬ್ಬಳ್ಳಿ ಸಜ್ಜು "ಶಿರಹಟ್ಟಿ ಸಂಸ್ಥಾನದ ಧ್ಯೇಯವಾಕ್ಯ 'ದ್ವೇಷ ಬಿಡು - ಪ್ರೀತಿ ಮಾಡು' ಸಂದೇಶವನ್ನು ಸಾರುವ ಈ ಬೃಹದಾಕಾರದ ತಕ್ಕಡಿ ಯನ್ನು ಒಂದೂವರೆ ತಿಂಗಳಿಂದ ಸಿದ್ಧಪಡಿಸಲಾಗಿದೆ.
ಒಟ್ಟು 5 ಬೃಹತ್ ಕಂಬಗಳ ಮಧ್ಯದಲ್ಲಿ ಈ ತಕ್ಕಡಿ ಅನುಷ್ಠಾನಗೊಳಿಸಲು ಆಯೋಜಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಏಕಕಾಲಕ್ಕೆ ಶ್ರೀಗಳನ್ನು ಹೊತ್ತ ಅಂಬಾರಿ (ಸಾಗವಾನಿ ಮರದ), ಆನೆ ಸಹಿತ ಅಂದಾಜು 5.5 ಟನ್ ತೂಕದ ತುಲಾಭಾರ ನಡೆಯಲಿದೆ. ತುಲಾ ಭಾರಕ್ಕೆ 10 ರೂ. ಮುಖಬೆಲೆಯ 5555 ಕೆಜಿ ನಾಣ್ಯ ಬಳಸಲಾಗುತ್ತಿದೆ. ಈ ನಾಣ್ಯಗಳು ಒಟ್ಟು 75 ಲಕ್ಷದ 40 ಸಾವಿರ ರೂಪಾಯಿಯದ್ದಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಇಷ್ಟೊಂದು ಬೃಹತ್ ತೂಕದ ತುಲಾಭಾರ ನಡೆಯುತ್ತಿದ್ದು, ಐತಿಹಾಸಿಕ ಪುಟದಲ್ಲಿ ದಾಖಲಾಗಲಿದೆ.
ಒಂದು ಲಕ್ಷ ಜನರಿಗೆ ಪ್ರಸಾದ ವ್ಯವಸ್ಥೆ:ಈ ಕುರಿತಂತೆ ಕಿರಿಯ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಶಿರಹಟ್ಟಿ ಫಕೀರ ಸಿದ್ದರಾಮ ಶ್ರೀಗಳ ಅಮೃತ ಮಹೋತ್ಸವ ಅಂಗವಾಗಿ ಫೆ.1ರಂದು ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ನಡೆಯುವ ಆನೆ, ಅಂಬಾರಿ ಸಹಿತ ಬೃಹತ್ ತುಲಾಭಾರವನ್ನು ಗಿನ್ನೆಸ್ ದಾಖಲೆಗೆ ಕಳುಹಿಸಲಾಗುವುದು. ಅದಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತುಲಾಭಾರದ ದಿನದಂದು ಒಂದು ಲಕ್ಷ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪೇಜಾವರ ಮಠಾಧೀಶರಿಗೆ ವೃಕ್ಷ ಬೀಜ ತುಲಾಭಾರ: ಪರಿಸರ ಸೇವೆಗೆ ಮಂಗಳೂರಿನಲ್ಲಿ ನಡೆಯಿತು ಹೊಸ ಪ್ರಯೋಗ