ಮೈಸೂರು:"ಮೃತಪಟ್ಟಿರುವ ಮೂವರು ಸಜಾ ಕೈದಿಗಳು ಕ್ರಿಸ್‌ಮಸ್ ಹಬ್ಬದ ವೇಳೆ ಕೇಕ್ ತಯಾರಿಕೆಗೆ ಬಳಸುವ ಸುಗಂಧ ದ್ರವ್ಯವನ್ನು ಹೆಚ್ಚಾಗಿ ಸೇವಿಸಿದ್ದಾರೆ. ಈ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ಅನಾರೋಗ್ಯ ಸಮಸ್ಯೆ ಉಂಟಾದಾಗ ವಿಚಾರ ಗೊತ್ತಾಯಿತು. ಅಷ್ಟೊತ್ತಿಗೆ ಅವರ ಪ್ರಾಣಕ್ಕೆ ತೊಂದರೆಯಾಗಿದೆ. ಮುಂಚೆಯೇ ಜೈಲಿನ ವೈದ್ಯಾಧಿಕಾರಿಗಳು ಹಾಗೂ ಕಾರಾಗೃಹದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಿದ್ದರೆ ಜೀವ ಉಳಿಸಬಹುದಿತ್ತು" ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎನ್.ರಮೇಶ್ ಈಟಿವಿ ಭಾರತ್‌ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಏನಿದು ಘಟನೆ?: ಸಜಾ ಕೈದಿಗಳಾಗಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕಾರಾಗೃಹದ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಡಿ.24ರಂದು ಕೇಕ್ ತಯಾರಿಸುತ್ತಿದ್ದಾಗ ರಾಸಾಯನಿಕವೊಂದನ್ನು ಕೇಕ್ ಜೊತೆ ಬೆರೆಸಿ ತಿಂದಿದ್ದರು. ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಎಲ್ಲರನ್ನೂ ಸರ್ಕಾರಿ ಕೆ.ಆರ್.ಆಸ್ಪತ್ರೆಯ ಜೈಲು ವಾರ್ಡ್ಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮಾದೇಶ, ಬುಧವಾರ ಮಧ್ಯರಾತ್ರಿ ನಾಗರಾಜ ಹಾಗೂ ಬುಧವಾರ ಮಧ್ಯಾಹ್ನ ರಮೇಶ್ ಎಂಬ ಕೈದಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ಕಾರಾಗೃಹದ ಅಧಿಕಾರಿಗಳು ಕೆ.ಆರ್.ಆಸ್ಪತ್ರೆ ವ್ಯಾಪ್ತಿಯ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ತಿಳಿಸಿದ್ದರು.