ಗದಗ/ಹಾವೇರಿ:ಸಾಲಬಾಧೆಯಿಂದ ಉಂಟಾದ ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ತೇಲಿ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಮಂಜುನಾಥ ತೇಲಿ, ಸಾವಕ್ಕ ತೇಲಿ ಮತ್ತು ರೇಣವ್ವ ತೇಲಿ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ: ಸಾಲದ ವಿಷಯಕ್ಕೆ ಮನಸ್ತಾಪ ಉಂಟಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದರಿಂದ ಮನನೊಂದ ಮಂಜುನಾಥ್ ತೇಲಿ ನೇರ ಹಾವೇರಿ ಜಿಲ್ಲೆಯ ಯಲವಿಗಿ ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಮಗನನ್ನು ಹಿಂಬಾಲಿಸಿ ತಾಯಿ ರೇಣವ್ವ ಸಹ ಬಂದಿದ್ದಾರೆ.
ರೈಲು ನಿಲ್ದಾಣದ ಸ್ವಲ್ಪ ದೂರದ ಬಳಿ ಮಂಜುನಾಥ್ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಮಗನನ್ನು ಹಿಂಬಾಲಿಸಿ ಬಂದಿದ್ದ ತಾಯಿ ರೇಣವ್ವ ಆತನನ್ನು ಕಾಪಾಡಲು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇವರಿಬ್ಬರ ಮೇಲೆ ಹರಿದಿದೆ.
ಭಾನುವಾರ ಹಾವೇರಿ ಜಿಲ್ಲೆಯ ಯಲವಿಗಿ ರೈಲು ನಿಲ್ದಾಣದ ಬಳಿಯ ಹಳಿಗಳ ಮೇಲೆ ಮಗ ಮಂಜುನಾಥ ತೇಲಿ ಹಾಗೂ ತಾಯಿ ರೇಣವ್ವ ಅವರ ಮೃತದೇಹಗಳು ಪತ್ತೆಯಾಗಿದ್ದವು. ಸುದ್ದಿ ತಿಳಿದ ರೈಲ್ವೇ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದರು. ಇಬ್ಬರು ಸಾವನ್ನಪ್ಪಿರುವ ಸುದ್ದಿ ತಿಳಿದ ಗೋನಾಳ ಗ್ರಾಮದ ಮನೆಯಲ್ಲಿ ಸಾವಕ್ಕ ತೇಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಕ್ಕ-ತಂಗಿಯರಾದ ಸಾವಕ್ಕ ಮತ್ತು ರೇಣುಕಾ ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದರು. ಬ್ಯಾಂಕ್‌ನಿಂದ 4 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಟ್ರ್ಯಾಕ್ಟರ್ ಕಂತು ವಿಚಾರವು ಕೂಡಾ ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಓದಿ:ಕಡಬ: ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ: ಆರೋಪಿ ಬಂಧನ