ಬೆಂಗಳೂರು:ಮನೆ ಬಳಿ ಬಂದು ಅವಾಚ್ಯ ಪದಗಳಿಂದ ನಿಂದಿಸುತ್ತಿರುವುದನ್ನು ಪ್ರಶ್ನಿಸಿದ ಯುವಕನ ಮೇಲೆ ಮಾಜಿ ಯೋಧ ಫೈರಿಂಗ್ ಮಾಡಿರುವ ಘಟನೆ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೂರಜ್ (31) ಎಂಬ ಯುವಕನ ಮೇಲೆ ಮಾಜಿ ಯೋಧ ಪರಶುರಾಮ್ (65) ಎಂಬುವರು ಫೈರಿಂಗ್ ಮಾಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿರುವ ಪರಶುರಾಮ್, ಪರವಾನಗಿ ಹೊಂದಿರುವ ಗನ್ ಇಟ್ಟುಕೊಂಡಿದ್ದಾರೆ. ಮೊದಲೇ ಪರಿಚಯಸ್ಥನಾಗಿದ್ದ ಆರೋಪಿ ಯಾವುದೋ ಒಂದು ವಿಚಾರಕ್ಕೆ ಸೋಮವಾರ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಇದನ್ನು ಪ್ರಶ್ನಿಸಲು ಸೂರಜ್ ಹಾಗೂ ಆತನ ತಂದೆ ಹೋದಾಗ ದಿಢೀರ್ ಗನ್ ತೆಗೆದು ಗುಂಡು ಹಾರಿಸಿದ್ದಾರೆ. ತಕ್ಷಣ ಸೂರಜ್ ತಪ್ಪಿಸಿಕೊಂಡ ಕಾರಣ ಯಾವುದೇ ಗಾಯಗಳಾಗಿಲ್ಲ.
ಪೊಲೀಸ್ ಮಾಹಿತಿ ಪ್ರಕಾರ, ಮನೆಗೆ ಪ್ರವೇಶಿಸಲು ಸೂರಜ್ ಹಾಗೂ ಆತನ ತಂದೆ ಪರಶುರಾಮ್ಗೆ ತಡೆದಿದ್ದು, ಇದರಿಂದ ಗಲಾಟೆ ನಡೆದಿದೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿ, ಏಕಾಏಕಿ ತಮ್ಮ ಬಳಿ ಇದ್ದ ಗನ್ ತೆಗೆದು ಸೂರಜ್ನತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದ ಯುವಕ ತಪ್ಪಿಸಿಕೊಂಡಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ ಪರಶುರಾಮ್ ಆತಂಕ ಸೃಷ್ಟಿಸಿದ್ದರು.