ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಅಮಿತ್ ದಿಗ್ವೇಕರ್ ಸೇರಿದಂತೆ ಇತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಗೌರಿ ಹತ್ಯೆ ಪ್ರಕರಣದ ಐದನೇ ಆರೋಪಿ ಅಮಿತ್ ದಿಗ್ವೇಕರ್, ಏಳನೇ ಆರೋಪಿ ಸುರೇಶ್ ಹೆಚ್. ಎಲ್ ಅಲಿಯಾಸ್ ಟೀಚರ್ ಮತ್ತು 17ನೇ ಆರೋಪಿ ಕೆ. ಟಿ ನವೀನ್ ಕುಮಾರ್ ಸಲ್ಲಿಸಿದ್ದ ಪ್ರತ್ಯೇಕ ಜಾಮೀನು ಅರ್ಜಿಗಳ ಸುದೀರ್ಘ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಧರ್ಮದ ಹೆಸರಿನಲ್ಲಿ ಬುದ್ದಿಜೀವಿಗಳನ್ನು ಕೊಲ್ಲುತ್ತಾ ಹೋದರೆ ಕೊನೆ ಇರುವುದಿಲ್ಲ. ಆರೋಪಿಗಳು ಇನ್ನಷ್ಟು ಕೊಲೆ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲಿ ಸಿಕ್ಕಿಬಿದ್ದಿದ್ದಾರೆ.
11ನೇ ಆರೋಪಿ ಮೋಹನ್ ನಾಯಕ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲ ಅರ್ಜಿದಾರರ ವಾದವಾಗಿತ್ತು.
ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಪ್ರಾಸಿಕ್ಯೂಷನ್, ಪ್ರಕರಣದ 11ನೇ ಆರೋಪಿ ಮೋಹನ್ ನಾಯಕ್. ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿದೆ. ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಏಕೈಕ ಮತ್ತು ಮೊದಲ ಆರೋಪಿ ಮೋಹನ್ ನಾಯಕ್ ಆಗಿದ್ದು, ಆತನ ಜಾಮೀನು ಆದೇಶವನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆಗೆ ಬಾಕಿಯಿದೆ ಎಂದು ವಿವರಿಸಿದರು.
ಅಲ್ಲದೆ, ಅರ್ಜಿದಾರರು ಆರೋಪ ಮುಕ್ತ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಲ್ಪಟ್ಟಿವೆ. ಗೌರಿ ಹತ್ಯೆ ಪ್ರಕರಣದಲ್ಲಿ ಅಪಾರ ಸಾಕ್ಷ್ಯವಿದೆ. ಇದೊಂದು ಹೀನಕೃತ್ಯವಾಗಿದ್ದು, ಅಪರಾಧದ ಗಂಭೀರತೆಯನ್ನು ಪರಿಗಣಿಸಬೇಕು. ಇದೊಂದು ಅಂತಾರಾಜ್ಯ ಸಿಂಡಿಕೇಟ್ ಆಗಿದ್ದು, ಆರೋಪಿಗಳು ಸುದೀರ್ಘವಾಗಿ ಜೈಲಿನಲ್ಲಿದ್ದಾರೆ ಎಂಬುದು ಜಾಮೀನಿಗೆ ಮಾನದಂಡವಾಗಬಾರದು ಎಂದರು.