ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಸೇರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಅನುಕುಮಾರ್ ಜಾಮೀನು ಅರ್ಜಿ ತೀರ್ಪು ಆ.31ಕ್ಕೆ ಹಾಗೂ ಸೆ.2ರಂದು ವಿನಯ್ ಹಾಗೂ ಕೇಶವಮೂರ್ತಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ನಾಲ್ವರು ನ್ಯಾಯಾಲಯಕ್ಕೆ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಮಧ್ಯಾಹ್ನ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್, ಹತ್ಯೆ ಸಂಚಿನಲ್ಲಿ ಪವಿತ್ರಾ ಗೌಡ ಅವರ ನೇರ ಪಾತ್ರವಿದೆ. ಚಿತ್ರದುರ್ಗದಿಂದ ಮೃತನನ್ನು ಅಪಹರಿಸಿ ಪಟ್ಟಣಗೆರೆ ಶೆಡ್ ಕರೆತಂದಿದ್ದರು. ಇತರೆ ಆರೋಪಿಗಳೊಂದಿಗೆ ಪವಿತ್ರಾ ತೆರಳಿ ಮೃತನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಇವರ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಗುರುತು ಪತ್ತೆಯಾಗಿದೆ. ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಮಹಿಳೆ ಎಂಬ ಕಾರಣಕ್ಕಾಗಿ ಜಾಮೀನು ನೀಡಕೂಡದು ಎಂದು ಮನವಿ ಮಾಡಿದರು.
ಇನ್ನು ಪ್ರಕರಣದಲ್ಲಿ ಎ7 ಆರೋಪಿ ಅನುಕುಮಾರ್, ಮೃತನ ಮನೆ ವಿಳಾಸ ಪತ್ತೆ ಹಚ್ಚಿ, ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿ ಕಾರಿನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ನಗರಕ್ಕೆ ಅಪಹರಿಸಿ ಕರೆತಂದಿದ್ದರು. ಟೋಲ್ ಕ್ಯಾಮರಾಗಳಲ್ಲಿ ಆರೋಪಿಯ ಚಹರೆ ಸೆರೆಯಾಗಿತ್ತು. ಮಾರ್ಗಮಧ್ಯೆ ಚಿನ್ನಾಭರಣ ದೋಚಿದ್ದಾನೆ. ವಿಚಾರಣೆ ವೇಳೆ ಇತರೆ ಆರೋಪಿಗಳೊಂದಿಗೆ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ವಾದ ಮಂಡಿಸಿದರು.
10 ದಿನದೊಳಗಾಗಿ ಚಾರ್ಜ್ಶೀಟ್ ಸಲ್ಲಿಕೆ:ಇನ್ನು ವಿನಯ್ ಜಾಮೀನು ಅರ್ಜಿ ಸಂಬಂಧ ವಾದ ಮುಂದುವರೆಸಿದ ಎಸ್ಪಿಪಿ, ಮೃತನ ಅರೆಪ್ರಜ್ಞಾ ಸ್ಥಿತಿಯಲ್ಲಿರುವ ಫೋಟೋವನ್ನು ಎ3 ಪವನ್, ವಿನಯ್ಗೆ ಕಳುಹಿಸಿದ್ದ. ಹತ್ಯೆ ಬಳಿಕ ಮೊಬೈಲ್ ನಲ್ಲಿದ್ದ ಫೋಟೋ ಡಿಲೀಟ್ ಮಾಡಿದ್ದ. ಮೊಬೈಲ್ ರಿಟ್ರೀವ್ ಮಾಡಿದಾಗ ಫೋಟೋ ಹಿಡಿದಿರುವುದು ರುಜುವಾಗಿದೆ. ಆರೋಪಿಗಳೊಂದಿಗೆ ಪಟ್ಟಣಗೆರೆ ಶೆಡ್ ಕಾವಲುಗಾರ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಸಿಆರ್ಪಿಸಿ 164ನಡಿ ಹೇಳಿಕೆ ದಾಖಲಿಸಲಾಗಿದೆ. ಹತ್ಯೆ ಮಾಡಲು ಎರಡು ತಿಂಗಳ ಹಿಂದೆ ಸಂಚು ರೂಪಿಸಲಾಗಿತ್ತು. ತನಿಖೆಯು ಅಂತಿಮ ಹಂತದಲ್ಲಿದ್ದು, 10 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವುದಾಗಿ ಮಾಹಿತಿ ನೀಡಿದರು.