ಮೈಸೂರು: ನಾಡಹಬ್ಬ ದಸರಾ ಎಂದರೆ ಆನೆ, ಅಂಬಾರಿ, ಅರಮನೆ, ಕಲಾತಂಡಗಳು ಹಾಗೂ ಇತರ ಸಾಂಸ್ಕೃತಿಕ ಲೋಕದ ಕಲರ್ಫುಲ್ ಚಿತ್ರಣ ಕಣ್ಮುಂದೆ ಬರುತ್ತದೆ. ಇಂತಹ ವೈಭವದ ಮಧ್ಯೆ ಒಬ್ಬ ವ್ಯಕ್ತಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಹೌದು, ನಾವೀಗ ಹೇಳಹೊರಟಿರುವ ವ್ಯಕ್ತಿಯ ಹೆಸರು ಮುಕ. ಕಳೆದ 20 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಇವರು ಮೈಸೂರಿಗೆ ಬರುತ್ತಿದ್ದಾರೆ. ಕೈಯಲ್ಲೊಂದು ನೀರಿನ ಬಕೆಟ್ ಹಾಗೂ ಬಾಟಲಿಯೊಂದಿಗೆ ಕಾರ್ಯಕ್ರಮಗಳ ಸಂದರ್ಭದಲ್ಲಿ ದಣಿವ ಜನರಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ.
ಮುಕ ಅವರು ಅರಮನೆ ಮುಂಭಾಗದ ಆನೆ ಶಿಬಿರದ ಬಳಿ ಕೋಡಿ ಸೋಮೇಶ್ವರ ದೇವಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮ್ಮ 'ಈಟಿವಿ ಭಾರತ' ಪ್ರತಿನಿಧಿ ಅವರನ್ನು ಮಾತಿಗೆಳೆದರು. ಈ ಸಂದರ್ಭದಲ್ಲಿ ತನ್ನ ಹೆಸರು 'ಮುಕ' ಎಂದಾಗಲು ಕಾರಣವೇನು? ತಮ್ಮ ವಿಳಾಸವೇನು? ದಸರಾದಲ್ಲಿ ತಮ್ಮ ಸೇವೆ ಏನು ಎಂಬೆಲ್ಲ ವಿಚಾರಗಳನ್ನು ಹಂಚಿಕೊಂಡರು.
ನನ್ನ ವಿಳಾಸ ಬೆಂಗಳೂರಿನ ರಾಜಭವನ. ನಾನು ಮೌನಾಚರಣೆ ಮಾಡಿರುವ ಕಾರಣಕ್ಕೆ ಹೆಸರು 'ಮುಕ' ಎಂದಾಯಿತು. ಕುಟುಂಬದಲ್ಲಿ ಜಗಳವಾಗಿ ಬೇಸರವಾಗಿ 15 ವರ್ಷಗಳ ಕಾಲ ಮಾತು ಬಿಟ್ಟಿದ್ದೆ. ನಾನೊಮ್ಮೆ ಪಾಸ್ಬುಕ್ ಮಾಡಿಸಲು ಹೋಗಿದ್ದಾಗ ನನ್ನ ಹೆಸರು 'ಮೌನ' ಆಗುವುದಿಲ್ಲ ಎಂದರು. ಅದಕ್ಕಾಗಿ 'ಮುಕ' ಎಂದು ಹೆಸರು ಬರೆದು ರಾಜಭವನವನ್ನೇ ವಿಳಾಸ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ನನ್ನ ತಂದೆ, ತಾಯಿ ನಾನು ಹುಟ್ಟಿದ ದಿನಾಂಕವನ್ನು ಬರೆದುಕೊಟ್ಟಿಲ್ಲ. ಹೀಗಾಗಿ ಒಂದು ಅಂದಾಜಿನ ಮೇಲೆ ಆಧಾರ್‌ನಲ್ಲಿ 54 ವರ್ಷ ಎಂದು ಬರೆಯಲಾಗಿದೆ. ಹುಟ್ಟಿದ ಸ್ಥಳವನ್ನು ನನ್ನ ತಾಯಿ-ತಂದೆ ನನಗೆ ಕೊಟ್ಟಿಲ್ಲ. ನಮಗೆ ಯಾರೂ ಕೂಡಾ ಬುದ್ಧಿ ಹೇಳಿಲ್ಲ. ಉಪನ್ಯಾಸ, ಪುಣ್ಯ ಸ್ಥಳಗಳು, ಪುರಾಣ ಹೇಳುವ ಸ್ಥಳಗಳಲ್ಲಿ ಕಾಲ ಕಳೆಯುವುದರಿಂದ ನನಗೆ ಉತ್ತಮ ಸಂಸ್ಕಾರ ಬಂದಿದೆ ಎಂದರು.