ಧಾರವಾಡ: ಪುಲ್ವಾಮಾ ದಾಳಿ ನಡೆದು 5 ವರ್ಷಗಳು ಕಳೆದಿದ್ದು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ಸ್ಮರಣಾರ್ಥ ನಗರದ ಡಿಸಿ ಕಚೇರಿ ಸಮೀಪದ ಕಾರ್ಗಿಲ್ ಸ್ತೂಪಕ್ಕೆ ಇಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ, ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿಯಾಗಿ ಇವತ್ತಿಗೆ ಐದು ವರ್ಷವಾಯಿತು. ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ವೀರ ಯೋಧರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. 2014ರ ನಂತರ ಶೇ.75 ರಷ್ಟು ಭಯೋತ್ಪಾದನೆ ಕಡಿಮೆಯಾಗಿದೆ. ನಕ್ಸಲಿಸಂ ಕೂಡಾ ಶೇ.70ರಷ್ಟು ಕಡಿಮೆಯಾಗಿದೆ ಎಂದರು.
ಈ ಹಿಂದೆ ದೇಶದ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿದ್ದವು. ಆದರೆ ಇದೀಗ ಅದಕ್ಕೆ ಕಡಿವಾಣ ಬಿದ್ದಿದೆ. ಗಡಿ ಪ್ರದೇಶಗಳಲ್ಲಿ ಅಂಗಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡುವಂತಹ ಘಟನೆಗಳು ನಡೆಯುತ್ತಿರುವುದು ಬಿಟ್ಟರೆ ದೇಶದಲ್ಲಿ ಬಹುತೇಕ ಭಯೋತ್ಪಾದನೆ ತಗ್ಗಿದೆ. ಭಯೋತ್ಪಾದನೆ ಮಟ್ಟ ಹಾಕುವುದು ಮೋದಿ ಸರ್ಕಾರದ ಸಂಕಲ್ಪ. ಇದರಿಂದಾಗಿ ಇಂದು ದೇಶ ಸುರಕ್ಷಿತವಾಗಿದೆ ಎಂದು ಹೇಳಿದರು.
ಬಿಜೆಪಿ ದೇಶ ಒಡೆದಿದೆ ಎಂದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮೊಯ್ಲಿ ಅವರಿಗೆ ಇತಿಹಾಸ ಗೊತ್ತಿಲ್ಲ ಅಥವಾ ಇವತ್ತು ಸೋಲಿನ ಹತಾಶೆಯಲ್ಲಿ ಈ ರೀತಿ ಹೇಳುತಿದ್ದಾರೆ. ನಾಲ್ಕು ರಾಜ್ಯದಲ್ಲಿ ಅವರು ಸೋತರು. ಈ ಎಲ್ಲ ಕಾರಣದಿಂದಾಗಿ ಅಪ್ರಬುದ್ಧರಾಗಿ ಮಾತನಾಡುತ್ತಿದ್ದಾರೆ. ಮೊಯ್ಲಿ ಅವರು ಪುಸ್ತಕ ಬರೆಯುವವರು. ಅವರೇ ಈ ರೀತಿಯಾಗಿ ಮಾತನಾಡಿದ್ದು ಆಶ್ಚರ್ಯವಾಯಿತು. ಈ ಬಗ್ಗೆ ಅವರು ಓದಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಇರಲೇ ಇಲ್ಲ ಎಂದು ಅವರೇ ಹೇಳುತ್ತಾರೆ. ಅಲ್ಲಿರದೇ ಇದ್ದ ಬಿಜೆಪಿ ದೇಶದ ಇಬ್ಭಾಗವನ್ನು ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಅಬುಧಾಬಿಯಲ್ಲಿ ಮಂದಿರ ನಿರ್ಮಾಣ ವಿಚಾರದ ಕುರಿತು ಮಾತನಾಡಿ, ಯುಎಇಯಲ್ಲಿ ದೇವಾಲಯ ನಿರ್ಮಾಣದ ಬಗ್ಗೆ ಪ್ರಧಾನಿ ಹೇಳಿದ್ದಕ್ಕೆ ಅಲ್ಲಿಯ ರಾಜ ಒಪ್ಪಿಗೆ ಸೂಚಿಸಿ ದೇವಸ್ಥಾನಕ್ಕೆ ಸ್ಥಳವನ್ನೂ ಕೊಟ್ಟರು. ಆರಾಧನೆಗೆ ಅವಕಾಶವನ್ನೂ ನೀಡಿದರು. ಅಲ್ಲಿ ಮಂದಿರ ನಿರ್ಮಾಣವಾಗಿದ್ದು ನಮ್ಮ ದೇಶ ಹಾಗೂ ನಮ್ಮ ಸಂಸ್ಕೃತಿಯ ಮಹತ್ವವನ್ನು ಎತ್ತಿ ತೊರಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಮತ್ತೊಂದು ಸಮೀಕ್ಷೆ-ಡಿ.ಕೆ.ಶಿವಕುಮಾರ್