ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಟೆಕ್ಕಿ ಆತ್ಮಹತ್ಯೆ ಪ್ರಕರಣ; ಪತ್ನಿ ಸಹಿತ ನಾಲ್ವರ ವಿರುದ್ಧ ಎಫ್ಐಆರ್

ಬೆಂಗಳೂರಲ್ಲಿ ಇತ್ತೀಚಿಗೆ ಟೆಕ್ಕಿಯೊಬ್ಬರು ಆತ್ಮತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ನಾಲ್ವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

Techie suicide
ಟೆಕ್ಕಿ ಆತ್ಮಹತ್ಯೆ ಪ್ರಕರಣ (ETV Bharat)

By ETV Bharat Karnataka Team

Published : Dec 11, 2024, 9:03 AM IST

Updated : Dec 11, 2024, 9:11 AM IST

ಬೆಂಗಳೂರು : ಡೆತ್ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನನ್ವಯ ಮಾರತ್ ಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಎಫ್ಐಆರ್ ದಾಖಲಾಗಿದೆ.

ಎಫ್ಐಆರ್‌ನಲ್ಲಿ ಏನಿದೆ..? ಅತುಲ್ ಸುಭಾಷ್, ನಿಕಿತಾ ಸಿಂಘಾನಿಯಾಗೆ 2019ರಲ್ಲಿ ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗು ಸಹ ಇದೆ. ಆದರೆ ತನ್ನ ತಾಯಿ ಹಾಗೂ ಸಹೋದರನ ಕುಮ್ಮಕ್ಕಿನಿಂದ ಪತಿ ಅತುಲ್ ಸುಭಾಷ್ ವಿರುದ್ಧ ನಿಕಿತಾ ಸುಳ್ಳು ದೂರು ದಾಖಲಿಸಿದ್ದಳು ಎಂದು ಆರೋಪಿಸಲಾಗಿದೆ. ಆರೋಪಿಗಳು ಅತುಲ್ ಸುಭಾಷ್‌ಗೆ ಪುತ್ರನ ಭೇಟಿಗೂ ಅವಕಾಶ ನೀಡದೆ 30 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಅಲ್ಲದೆ ಪ್ರಕರಣದ ನ್ಯಾಯಾಲಯದ ಕಲಾಪಗಳಿಗೆ ಅತುಲ್ ಸುಭಾಷ್ ಹಾಜರಾದ ಸಂದರ್ಭದಲ್ಲಿ '3 ಕೋಟಿ ರೂ. ಕೊಡು, ಇಲ್ಲದಿದ್ದರೆ ಬದುಕಿರಬೇಡ' ಎಂದು ಅಣಕಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದು ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಕಾಸ್ ಕುಮಾರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೃತನ ಸಹೋದರನ ದೂರಿನನ್ವಯ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ. ಶಿವಕುಮಾರ್ ಗುಣಾರೆ ತಿಳಿಸಿದರು.

ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ (34) ಡಿಸೆಂಬರ್ 9ರಂದು ಮಾರತ್ ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ‌ ಆತ್ಮಹತ್ಯೆಗೆ ಶರಣಾಗಿದ್ದರು. ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟು, ಸಾವಿನ ಬಳಿಕ ಮೃತದೇಹ ಗಮನಿಸುವವರಿಗೆ ವ್ಯವಸ್ಥಿತವಾಗಿ ಸೂಚನೆಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿತ್ತು.

ಮಗನಿಗೆ ಗಿಫ್ಟ್​​ ಬಾಕ್ಸ್​​; ಗಿಫ್ಟ್ ಬಾಕ್ಸ್ಅನ್ನು ಮನೆಯಲ್ಲಿಟ್ಟು, ತನ್ನ ನಾಲ್ಕು ವರ್ಷದ ಪುತ್ರನಿಗೆ ತಲುಪಿಸುವಂತೆ ಉಲ್ಲೇಖಿಸಿದ್ದರು. ನಂತರ 'JUSTICE IS DUE' ಎಂಬ ಬರಹವಿರುವ ಪೋಸ್ಟರ್, ಹಾಗೂ ಪೂರ್ಣಗೊಳಿಸಿರುವ ತನ್ನ ಕೆಲಸಗಳ ಪಟ್ಟಿಯನ್ನ ಗೋಡೆಗೆ ಅಂಟಿಸಿ ಅತುಲ್​ ಸುಭಾಷ್​ ತನ್ನ ಬದುಕಿಗೆ ಕೊನೆಹಾಡಿದ್ದರು.

ಆತ್ಮಹತ್ಯೆ ಪರಿಹಾರವಲ್ಲ;ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರೆ, ಅಥವಾ ಸ್ನೇಹಿತರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಯಾರಾದರೂ ನಿಮ್ಮ ನೋವನ್ನು ಕೇಳಲು ಇರುತ್ತಾರೆ. ಅದಕ್ಕಾಗಿ ಸ್ನೇಹ ಫೌಂಡೇಶನ್‌ಗೆ ಕರೆ ಮಾಡಿ - 04424640050 (24x7 ಲಭ್ಯವಿದೆ) ಅಥವಾ iCall, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 9152987821, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ ಲಭ್ಯವಿರುತ್ತದೆ).

ಇದನ್ನೂ ಓದಿ: ಮದರಸಾದಲ್ಲಿ ಶಿಕ್ಷಕರಿಂದ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಕೇಸ್​ ರದ್ದತಿಗೆ ಹೈಕೋರ್ಟ್ ನಿರಾಕರಣೆ

Last Updated : Dec 11, 2024, 9:11 AM IST

ABOUT THE AUTHOR

...view details