ಹಾವೇರಿ: ಕಳೆದ ಮೂರು ದಿನಗಳಿಂದ ಜಿಲ್ಲಾಸ್ಪತ್ರೆಯ ಸಿಟಿ ಸ್ಕ್ಯಾನ್ ಸೆಂಟರ್ ಸೇವೆ ಸ್ಥಗಿತಗೊಂಡ ಪರಿಣಾಮ ಜಿಲ್ಲಾಸ್ಪತ್ರೆಯಲ್ಲಿ ಉಚಿತ ರಿಯಾಯತಿ ದರದಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಲು ದೂರದೂರಿಂದ ಬರುವ ಬಡ ರೋಗಿಗಳು ಪರದಾಡುವಂತಾಗಿದೆ. ಕೆಲವರು ಸಾಲ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುತ್ತಿದ್ದರೆ, ದುಡ್ಡಿಲ್ಲದವರು ಸ್ಕ್ಯಾನ್ ಇಲ್ಲದೆ ಕೇವಲ ಚಿಕಿತ್ಸೆ ಪಡೆದು ಗ್ರಾಮಕ್ಕೆ ಮರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ ಎನ್ನುತ್ತಾರೆ ರೋಗಿಗಳು.
ಸ್ಕ್ಯಾನ್ ಸೆಂಟರ್ ನಿರ್ವಹಣೆ ಮಾಡುತ್ತಿರುವ ಕೃಷ್ಣ ಡೈಗ್ನೋಸ್ಟಿಕ್‌ಗೆ ಕಳೆದ 6 ತಿಂಗಳುಗಳಿಂದ ಸರ್ಕಾರ ಹಣ ಪಾವತಿ ಮಾಡದಿರುವುದರಿಂದ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದೆ. ಕೃಷ್ಣ ಡೈಗ್ನೋಸ್ಟಿಕ್ಸ್ ರಾಜ್ಯದ 14 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪುಣೆ ಮೂಲದ ಈ ಕಂಪನಿ 2017ರಲ್ಲಿಯೇ ಆರೋಗ್ಯ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ.
ರೋಗಿಗಳ ಅಸಹಾಯಕತೆ; ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ರಿಯಾಯಿತಿ ದರದಲ್ಲಿ ಮಾಡಲಾಗುತ್ತೆ. ಆದರೆ, ಸರ್ಕಾರ ಈ ಸಂಸ್ಥೆಗೆ ನೀಡಬೇಕಿದ್ದ ಹಣ ಬಾಕಿ ಉಳಿಸಿಕೊಂಡಿದ್ದರಿಂದ 3 ದಿನಗಳಿಂದ ಸ್ಕ್ಯಾನಿಂಗ್ ಸೇವೆ ನಿಂತಿದೆ. ಪರಿಣಾಮ ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳು ಪರಿತಪಿಸ್ತಿದ್ದಾರೆ. ಕಳೆದ ಈ ಸ್ಕ್ಯಾನಿಂಗ್ ಸೇವೆ ಬಂದ್ ಆಗಿದ್ದರಿಂದ ರೋಗಿಗಳು ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳ ಮೊರೆ ಹೋಗಿದ್ದಾರೆ. ದುಡ್ಡು ಇದ್ದೋರು ಪ್ರೈವೇಟ್ ಸ್ಕ್ಯಾನಿಂಗ್ ಸೆಂಟರ್ಗೆ ಹೋಗುತ್ತಿದ್ದಾರೆ. ನಾವೇನು ಮಾಡೋಣ ಎಂದು ಕೆಲವು ರೋಗಿಗಳು ಅಸಹಾಯಕತೆ ಹೊರಹಾಕಿದ್ದಾರೆ.