ಆಟೋಗೆ ಕ್ಯಾಂಟರ್ ಡಿಕ್ಕಿ (ETV Bharat) ಶಿವಮೊಗ್ಗ : ಆಟೋಗೆ ಕ್ಯಾಂಟರ್ ಹಿಟ್ ಅಂಡ್ ರನ್ ಮಾಡಿದ ಪರಿಣಾಮ ಆಟೋದಲ್ಲಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತಾವರೆ ಚಟ್ನಳ್ಳಿ ಬಳಿ ನಡೆದಿದೆ. ಘಟನೆಯಲ್ಲಿ ಗಾನವಿ (17) ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಈಕೆಯ ತಾಯಿ ಹಾಗೂ ಅಜ್ಜಿ ಗಾಯಗೊಂಡಿದ್ದಾರೆ. ಗಾನವಿ ತಾವರೆ ಚಟ್ನಳ್ಳಿಯ ಪೇಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ತನ್ನ ಕಾಲೇಜಿನ ಎದುರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.
ಗಾನವಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಅಜ್ಜಂಪುರದ ನಿವಾಸಿ. ಗಾನವಿಗೆ ಇಂದು ರಜೆ ಇದ್ದ ಕಾರಣ ಇವರ ತಾಯಿ ಹಾಗೂ ಅಜ್ಜಿ ಈಕೆಯನ್ನು ಸಂಬಂಧಿಕರ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಕಾಲೇಜಿಗೆ ವಾಪಸ್ ಆಗುವಾಗ ವಿಧಿಯ ಆಟಕ್ಕೆ ಗಾನವಿ ಬಲಿಯಾಗಿದ್ದಾಳೆ. ದ್ವಿಪಥ ರಸ್ತೆಯಿಂದ ಬಲಕ್ಕೆ ತಿರುಗಿದರೆ ಗಾನವಿಯ ಕಾಲೇಜು ಇತ್ತು. ಕಾಲೇಜು ಸೇರಬೇಕಿದ್ದ ಗಾನವಿ ಸಾವನ್ನಪ್ಪಿದ್ದಾಳೆ.
ವೇಗವಾಗಿ ಬಂದ ಕ್ಯಾಂಟರ್ ಆಟೋಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಎಡಕ್ಕೆ ಬಿದ್ದಿದೆ. ಆಟೋ ಎಡ ಭಾಗದಲ್ಲಿದ್ದ ಗಾನವಿ ಮೊದಲು ನೆಲಕ್ಕೆ ಬಿದ್ದಿದ್ದಾಳೆ. ಇದರಿಂದ ಆಕೆಯ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಹೊಡೆತ ಬಿದ್ದಿದೆ. ಪರಿಣಾಮ ರಕ್ತಸ್ರಾವದಿಂದ ಗಾಯಗೊಂಡಿದ್ದ ಗಾನವಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾಳೆ. ಈಕೆಯ ತಾಯಿ ಹಾಗೂ ಅಜ್ಜಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಟ್ ಅಂಡ್ ರನ್ ಮಾಡಿದ ಕ್ಯಾಂಟರ್ನ್ನು ಚೀಲೂರಿನಲ್ಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಪಘಾತ ಮಾಡಿ ನಿಲ್ಲಿಸದೆ ಪರಾರಿಯಾಗಿದ್ದ ಕ್ಯಾಂಟರ್ ಅನ್ನು ಸ್ಥಳೀಯರು ಹಿಂಬಾಲಿಸಿಕೊಂಡು ಹೋಗಿ ಹಿಡಿಯಲು ಹೋದಾಗ ಅವರ ಕಾರಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ. ಈ ಕುರಿತು ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ಯಾಂಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ :ವಾಟರ್ ಟ್ಯಾಂಕರ್ ವಾಹನ ಹಿಟ್ ಆ್ಯಂಡ್ ರನ್; ಬೈಕ್ ಹಿಂಬದಿ ಸವಾರ ಸಾವು - ROAD ACCIDENT