ಬೆಂಗಳೂರು:2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಮೌಲ್ಯಮಾಪನ ಮುಕ್ತಾಯಗೊಂಡಿದ್ದು, ದತ್ತಾಂಶಗಳ ಗಣಕೀಕರಣಗೊಳಿಸುವ ಕಾರ್ಯ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೇ 8 ಅಥವಾ 10 ರಂದು ಫಲಿತಾಂಶ ಪ್ರಕಟಿಸುವ ಚಿಂತನೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ್ದು, ಅಧಿಕೃತ ಪ್ರಕಟಣೆ ಬಾಕಿ ಇದೆ. ಗಣಕೀಕೃತ ವ್ಯವಸ್ಥೆ ಆಧಾರದಲ್ಲಿ ದಿನಾಂಕದ ಪರಿಷ್ಕರಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಗಿದಿದೆ. ಫಲಿತಾಂಶದ ಕ್ರೋಢೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ. ಅಂಕಗಳ ಅಂಕಿ-ಅಂಶಗಳನ್ನು ಗಣಕೀಕೃತ ವ್ಯವಸ್ಥೆಗೆ ದಾಖಲಿಸುವ ಕೆಲಸ ಪ್ರಗತಿಯಲ್ಲಿದೆ.
ಮೇ 8 ಅಥವಾ 10 ರಂದು ಫಲಿತಾಂಶ ಪ್ರಕಟಿಸಲು ಮಂಡಳಿ ಚಿಂತನೆ ನಡೆಸಿದೆ. ಸದ್ಯ ಇನ್ನೂ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ, ಫಲಿತಾಂಶ ಪ್ರಕಟಿಸುವ ಹಿಂದಿನ ದಿನ ಅಧಿಕೃತವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.