ಮೈಸೂರು: ಶ್ರೀರಂಗಪಟ್ಟಣ ದಸರಾದಲ್ಲಿ ಈಗಾಗಲೇ ಎರಡು ಬಾರಿ ಅಂಬಾರಿ ಹೊತ್ತು ಸೈ ಎನ್ನಿಸಿಕೊಂಡಿರುವ ಮಹೇಂದ್ರ ಆನೆಗೆ ಶನಿವಾರ ಸಂಜೆ 750 ಕೆ.ಜಿ ತೂಕದ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.
ನಾಡಹಬ್ಬದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈಗಾಗಲೇ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಮರದ ಅಂಬಾರಿ ತಾಲೀಮು ನಡೆಸಲಾಗಿದೆ. ಮಹೇಂದ್ರನಿಗೆ ಅರಮನೆಯ ಆವರಣದಲ್ಲಿ ಮರದ ಅಂಬಾರಿ ಕಟ್ಟಿ, ಅದರ ಜೊತೆಗೆ ಗಾದಿ ಹಾಗೂ ಮರಳಿನ ಮೂಟೆಯೊಂದಿಗೆ ತಾಲೀಮು ಮಾಡಲಾಯಿತು. ಇದಾದ ಬಳಿಕ ಧನಂಜಯ, ಸುಗ್ರೀವಾ, ಗೋಪಿ ಹಾಗೂ ಭೀಮಾ ಆನೆಗಳಿಗೆ ಮರದ ಅಂಬಾರಿ ತಾಲೀಮು ನಡೆಸಲಾಗುತ್ತದೆ.
ಮಹೇಂದ್ರ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು (ETV Bharat) ಈ ಬಾರಿಯೂ ಶ್ರೀರಂಗಪಟ್ಟಣ ದಸರಾಗೆ ಮಹೇಂದ್ರನೇ ಅಂಬಾರಿ ಹೊರುವ ಸಾಧ್ಯತೆ ಇದೆ. ಮರದ ಅಂಬಾರಿ ಹಾಗೂ ಮರಳಿನ ಮೂಟೆ ಹೊತ್ತು ಮಹೇಂದ್ರ ಆನೆ ಅರಮನೆಯಿಂದ ಜಂಬೂ ಸವಾರಿ ಸಾಗುವ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತದ ಮೂಲಕ ಬನ್ನಿಮಂಟಪದವರೆಗೆ ಸರಾಗವಾಗಿ ಸಾಗಿತು. ಇದರೊಂದಿಗೆ ಈ ಬಾರಿಯೂ ಅಂಬಾರಿ ಹೊರುವ ಭರವಸೆಯನ್ನು ಮಹೇಂದ್ರ ಮೂಡಿಸಿದ್ದಾನೆ. ಮತ್ತಿಗೋಡು ಆನೆ ಶಿಬಿರದಿಂದ ದಸರಾಗೆ ಆಗಮಿಸಿರುವ ಈ ಆನೆ ಸುಮಾರು 4,910 ತೂಕವಿದೆ.
ಡಿಸಿಎಫ್ ಪ್ರತಿಕ್ರಿಯೆ: "ಜಂಬೂ ಸವಾರಿಯ ಗಜಪಡೆಗೆ ಮೂರು ಹಂತದ ತಾಲೀಮು ನಡೆಸಲಾಗುತ್ತದೆ. ಮೊದಲನೇ ಹಂತದಲ್ಲಿ ಡ್ರೈ ತಾಲೀಮು, ಎರಡನೇ ಭಾರ ಹೊರುವ ತಾಲೀಮು, ಮೂರನೇ ಹಂತದಲ್ಲಿ ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಗುತ್ತದೆ. ಈಗಾಗಲೇ ಅಭಿಮನ್ಯುವಿಗೆ ಮರದ ಅಂಬಾರಿ ಹೊರುವ ತಾಲೀಮು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರ ಜೊತೆಗೆ ಬ್ಯಾಕ್ ಆಪ್ ಉದ್ದೇಶದಿಂದ ಐದು ಆನೆಗಳಿಗೆ ಮರದ ಅಂಬಾರಿ ತಾಲೀಮು ನಡೆಸಲಾಗಿದೆ. ಮಹೇಂದ್ರನಿಗೆ ಮರದ ಅಂಬಾರಿ ತಾಲೀಮನ್ನು ಜಂಬೂ ಸವಾರಿಯ ದಿನ ಯಾವ ರೀತಿ ನಡೆಯುತ್ತದೆಯೋ ಅದೇ ರೀತಿ ಕಟ್ಟಿ ನಡೆಸಲಾಗಿದೆ. ಶ್ರೀರಂಗಪಟ್ಟಣದ ದಸರಾಗೆ ಯಾವ ಆನೆಗಳು ಭಾಗವಹಿಸುತ್ತವೆ ಎಂಬುದನ್ನು ಇನ್ನೆರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು" ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.
ಇದನ್ನೂ ಓದಿ:ಮೈಸೂರು ಅರಮನೆ ಆವರಣದಲ್ಲಿ ದಿಢೀರ್ ಕಾದಾಟಕ್ಕಿಳಿದು ಹೊರಬಂದ ಆನೆಗಳು: ಬೆಚ್ಚಿಬಿದ್ದ ಜನ, ಮಾವುತರು! - Two elephants fight