ಬೆಂಗಳೂರು: ಬೆಳೆಗಳಿಗೆ ತಗುಲಬಹುದಾದ ರೋಗದ ಬಗ್ಗೆ ಮತ್ತು 14 ದಿನಗಳ ಹವಾಮಾನ ಮುನ್ಸೂಚನೆ ಮಾಹಿತಿ ನೀಡುವ 'ಕೈರೋ' ಎಂಬ ಸೌರ ವಿದ್ಯುತ್ ಚಾಲಿತ ಯಂತ್ರಾಂಶ (ಡಿವೈಸ್) ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಎಲ್ಲರ ಗಮನ ಸೆಳೆಯಿತು.
ಬೆಂಗಳೂರು ಮೂಲದ ಫೈಲೋ ಕಂಪನಿ ಅಭಿವೃದ್ಧಿಪಡಿಸಿದ 'ಕೈರೋ' ಸ್ಮಾರ್ಟ್ ಬೇಸಾಯಕ್ಕೆ ಪ್ರೋತ್ಸಾಹಿಸುತ್ತಿದೆ. ಈ ಸ್ಮಾರ್ಟ್ ಬೇಸಾಯದಿಂದ ಅಧಿಕ ಇಳುವರಿಯೂ ಬರುತ್ತದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯ ತಯಾರಿಕಾ ಘಟಕ ಉತ್ತರಪ್ರದೇಶದ ಗುರುಗಾಂವ್‌ನಲ್ಲಿದೆ. ಸೌರಶಕ್ತಿ ಬಳಸುವ ಸ್ವಯಂಚಾಲಿತ ಡಿವೈಸ್ ಕ್ರಮೇಣ ರೈತರ ಗಮನಸೆಳೆಯುತ್ತಿದೆ.
ಕೈರೋ ಉಪಕರಣದಿಂದಾಗುವ ಅನುಕೂಲವೇನು?: ತೋಟಗಳಲ್ಲಿ ಕೈರೋ ಉಪಕರಣ ಅಳವಡಿಸಿದರೆ ಒಂದು ಕಿ.ಮೀ. ಸುತ್ತಳತೆಯಲ್ಲಿ ನಿರ್ದಿಷ್ಟ ಬೆಳೆ, ಮಣ್ಣು ಕುರಿತು ನಿರಂತರ ಮೇಲ್ವಿಚಾರಣೆ ಮಾಡುತ್ತದೆ. ರಸಗೊಬ್ಬರ ಅಥವಾ ಕ್ರಿಮಿನಾಶಕ ಎಷ್ಟು ಬಳಸಬೇಕು, ಯಾವಾಗ ಸಿಂಪಡಿಸಬೇಕು. ಪ್ರಮಾಣದ ನಿಖರತೆ ತಿಳಿಸಿಕೊಡುತ್ತದೆ.ಒಂದು ವಾರದ ಮುನ್ನವೇ ನಿರ್ದಿಷ್ಟ ರೋಗಗಳ ಬಗ್ಗೆ ಎಚ್ಚರಿಕೆ, 14 ದಿನಗಳ ಹವಾಮಾನ ಮುನ್ಸೂಚನೆ ನೀಡುತ್ತದೆ. ನೀರಾವರಿ, ರಸಗೊಬ್ಬರ, ರೋಗ/ಕೀಟಗಳ ಹತೋಟಿ ಕ್ರಮದ ವೇಳಾಪಟ್ಟಿಯನ್ನು ನಿರ್ವಹಿಸಿ ರೈತರಿಗೆ ಆಸರೆಯಾಗಿ ನಿಲ್ಲುವ ಸಾಧನವಾಗಿದೆ.
ಹವಾಮಾನ ಮುನ್ಸೂಚನೆ, ನೀರಾವರಿ, ರಸಗೊಬ್ಬರ, ರೋಗ/ಕೀಟಗಳ ಹತೋಟಿ ಕ್ರಮದ ವೇಳಾಪಟ್ಟಿ ನಿರ್ವಹಿಸಿ ರೈತರಿಗೆ ಆಸರೆಯಾಗಿ ನಿಲ್ಲುತ್ತದೆ. ಗಾಳಿಯ ವೇಗ, ಮಳೆಯ ಮಾಪಕ, ಎಲೆಯ ತೇವಾಂಶ, ಬೆಳಕಿನ ತೀವ್ರತೆ, ಗಾಳಿಯ ದಿಕ್ಕು, ಒತ್ತಡ, ಎಲೆ ಹಾಗೂ ಮಣ್ಣಿನ ತೇವಾಂಶ, ತಾಪಮಾನದ ಸಾಂದ್ರಕ ವಿಭಾಗಗಳನ್ನು ನೀರೋ ಡಿವೈಸ್ ಒಳಗೊಂಡಿದೆ. ಉತ್ಪಾದನಾ ವೆಚ್ಚ ಕಸಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ.