ಹುಬ್ಬಳ್ಳಿ: 'ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ ಹು-ಧಾ ಪೊಲೀಸರು ನಗರ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಹಾಗೂ ಇನ್ನಿತರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.
ಇದೀಗ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ, ಸಾರ್ವಜನಿಕರಲ್ಲಿ ಭದ್ರತೆ, ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಮೇ 18 ರಂದು ಇಲ್ಲಿನ ಹಳೇಹುಬ್ಬಳ್ಳಿಯ ಗೌರಿಯಾಟೌನ್ ಗಾರ್ಡನ್ ಹತ್ತಿರದ ಸ್ಥಳದಲ್ಲಿ ತಲ್ವಾರ್ಗಳನ್ನು ಸಂಗ್ರಹಿಸಿ ಅಪರಾಧ ಕೃತ್ಯ ಎಸಗಲು ನಾಲ್ವರು ಯೋಜನೆ ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕಸಬಾಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಟಗರ ಓಣಿಯ ಮಹಮ್ಮದ್ ಸಾಧಿಕ ಅಲಿಯಾಸ್ ಬಾಬಾಸಾಧಿಕ್ ಬೇಪಾರಿ (28), ದಾದಾಪೀರ ಚೌಧರಿ (26), ಕೋಳೆಕರ ಪ್ಲಾಟ್'ನ ಆಸೀಫ್ ಬೇಪಾರಿ (26), ಬುಲ್ಡೋಜರ್ ನಗರದ ಮೋಹಿನಖಾನ ಧಾರವಾಡ (24) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ತಲ್ವಾರ್ಗಳನ್ನು ವಶಕ್ಕೆ ಪಡೆದಿದ್ದು, ಆರ್ಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.