ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್, 10 ಸಾವಿರ ಭಕ್ತರ ಪ್ರಯಾಣ

ಶೀಗಿ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನ ಗುಡ್ಡಕ್ಕೆ ಇಂದು ಆರಂಭಿಸಿದ್ದ ವಿಶೇಷ ಬಸ್ ವ್ಯವಸ್ಥೆ ಶುಕ್ರವಾರ ಕೂಡ ಇರಲಿದೆ ಎಂದು ಹುಬ್ಬಳ್ಳಿ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

ಯಲ್ಲಮ್ಮನ ಗುಡ್ಡಕ್ಕೆ ತೆರಳಲು ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ನೆರೆದ ಜನರು
ಯಲ್ಲಮ್ಮನ ಗುಡ್ಡಕ್ಕೆ ತೆರಳಲು ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ನೆರೆದ ಜನರು (ETV Bharat)

By ETV Bharat Karnataka Team

Published : Oct 17, 2024, 9:13 PM IST

ಹುಬ್ಬಳ್ಳಿ: ಶೀಗಿ ಹುಣ್ಣಿಮೆಯ ಪ್ರಯುಕ್ತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ವ್ಯವಸ್ಥೆ ಮಾಡಿದ್ದ ವಿಶೇಷ ಬಸ್​ಗಳಲ್ಲಿ ಅಕ್ಟೋಬರ್ 17ರಂದು ಗುರುವಾರ ಅಂದಾಜು 10 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ‌ ಮಾಡಿದ್ದಾರೆ. ಅ.18ರಂದು ಶುಕ್ರವಾರವೂ ಸಹ ವಿಶೆಷ ಬಸ್​ಗಳ ವ್ಯವಸ್ಥೆ ಇರುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದರು.

ಪ್ರತಿ ವರ್ಷ ಶೀಗಿ ಹುಣ್ಣಿಮೆಗೆ ಹುಬ್ಬಳ್ಳಿ, ನವಲಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ರೇಣುಕಾ ದೇವಿಯ ದರ್ಶನಕ್ಕಾಗಿ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗಿಬರುತ್ತಾರೆ. ಅದರಂತೆ, ಈ ಬಾರಿ ಶೀಗಿ ಹುಣ್ಣಿಮೆ ದಿನ ಅಕ್ಟೋಬರ್ 17ರಂದು ಗುರುವಾರ ಹಾಗೂ ದೇವಿಯ ವಾರದ ನಿಮಿತ್ಯ 18ರಂದು ಶುಕ್ರವಾರ ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಬಸ್ ನಿಲ್ದಾಣ ಹಾಗೂ ನವಲಗುಂದ ಬಸ್ ನಿಲ್ದಾಣದಿಂದ ನೇರವಾಗಿ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಹುಬ್ಬಳ್ಳಿ: ಶೀಗಿ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ (ETV Bharat)

ಅಕ್ಟೋಬರ್ 17ರಂದು ಗುರುವಾರ ಬೆಳಗ್ಗೆಯಿಂದಲೇ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ವಸತಿ ಬಸ್​ಗಳಲ್ಲಿ ಭಕ್ತರು ಬಸ್ ನಿಲ್ದಾಣಗಳಿಗೆ ಬರಲಾರಂಭಿಸಿದ್ದರು. ಸಂಜೆಯವರೆಗೆ ಮೂರು ಬಸ್ ನಿಲ್ದಾಣಗಳಿಂದ ಒಟ್ಟು 87 ವಿಶೇಷ ಬಸ್​ಗಳನ್ನು ಬಿಡಲಾಯಿತು. ಹೋಗುವ ಹಾಗೂ ಬರುವ ಎರಡೂ ಸರತಿಗಳಲ್ಲಿ ಭಕ್ತರು ಸೇರಿದಂತೆ ಅಂದಾಜು 10,500 ಜನರು ಪ್ರಯಾಣ ಮಾಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರೇ ಇದ್ದರು.

ವಿಭಾಗೀಯ ತಾಂತ್ರಿಕ ಇಂಜಿನಿಯರ್ ಪಿ.ವೈ.ಗಡಾದ, ಡಿಪೋ ಮ್ಯಾನೇಜರ್ ರೋಹಿಣಿ, ನಾಗರಾಜ, ಮುನ್ನಾಸಾಬ್, ನಿಲ್ದಾಣಾಧಿಕಾರಿ ಸುಭಾಸ, ವಿ.ಎಸ್.ಹಂಚಾಟೆ ಮತ್ತು ಇತರೆ ಅಧಿಕಾರಿಗಳಾದ ಸದಾನಂದ ಒಡೆಯರ, ಸುನಿಲ ವಾಡೇಕರ, ಐ.ಜಿ.ಮಾಗಾಮಿ, ಐ.ಐ.ಕಡ್ಲಿಮಟ್ಟಿ ಮತ್ತಿತರರು ವಿಶೇಷ ಬಸ್​​ಗಳ ಮೇಲ್ವಿಚಾರಣೆ ಮಾಡಿದರು. ದೇವಿಯ ವಾರದ ನಿಮಿತ್ಯ ಶುಕ್ರವಾರ ಅ.18 ರಂದು ಸಹ ವಿಶೇಷ ಬಸ್​ಗಳ ವ್ಯವಸ್ಥೆ ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹುಬ್ಬಳ್ಳಿ-ಯಲ್ಲಮ್ಮನ ಗುಡ್ಡ: ಈ ಬಸ್​​ಗಳು ಧಾರವಾಡ, ಅಮ್ಮಿನಭಾವಿ, ಸವದತ್ತಿ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುತ್ತವೆ.

ನವಲಗುಂದ-ಯಲ್ಲಮ್ಮನ ಗುಡ್ಡ:ಈ ಬಸ್​ಗಳು ನವಲಗುಂದ ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಗೊಬ್ಬರ ಗುಂಪಿ, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ ಎಂದು ಮಾಹಿತಿ ನೀಡಿದರು

ಇದನ್ನೂ ಓದಿ:ರೇಣುಕಾ ಯಲ್ಲಮ್ಮನ ಪಡ್ಡಲಗಿ ತುಂಬಿಸಲು ದೇವಗಿರಿಯಿಂದ ಸವದತ್ತಿಗೆ ಬಂಡಿ ಯಾತ್ರೆ ಕೈಗೊಂಡ ಮುಸ್ಲಿಂ ಭಕ್ತ

ಇದನ್ನೂ ಓದಿ:16,200 ಕೆ.ಜಿ. ದೀಪದ ಎಣ್ಣೆ ಸಂಗ್ರಹಿಸಿ ಯಲ್ಲಮ್ಮದೇವಿ ದೇವಾಲಯ ದಾಖಲೆ! 21 ಲಕ್ಷ ಭಕ್ತರಿಂದ ತಾಯಿ ದರ್ಶನ

ABOUT THE AUTHOR

...view details