ಬೆಂಗಳೂರು:16ನೇ ವಿಧಾನಸಭೆಯ 4ನೇ ಅಧಿವೇಶನದಲ್ಲಿ ದಿನಾಂಕ ಜುಲೈ15ರಿಂದ 25ರವರೆಗೆ ಒಟ್ಟು 8 ದಿನಗಳ ಕಾಲ, ಸುಮಾರು 37 ಗಂಟೆಯವರೆಗೆ ಕಾರ್ಯಕಲಾಪ ನಡೆಸಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಮೊದಲನೇ ದಿನ ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಅಂಗೀಕರಿಸಲಾಗಿದೆ. ಮಾನ್ಯ ರಾಷ್ಟ್ರಪತಿ/ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿ ಮಂಡಿಸಲಾಗಿದೆ ಎಂದರು.
2024-25ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತನ್ನು ಜುಲೈ 23ರಂದು ಮಂಡಿಸಿ, ಜುಲೈ 24ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡಿರುವ ಲೆಕ್ಕಪರಿಶೋಧನಾ ವರದಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಾಯ್ದೆಯ ಅನುಷ್ಠಾನದ ಮೇಲಿನ ಕಾರ್ಯ ನಿರ್ವಾಹಣಾ ಲೆಕ್ಕಪರಿಶೋಧನಾ ವರದಿ ಹಾಗೂ ಮಾರ್ಚ್ 2022ಕ್ಕೆ ಕೊನೆಗೊಂಡ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ಅನುಸರಣಾ ಲೆಕ್ಕಪರಿಶೋಧನಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ 2023-24ನೇ ಸಾಲಿನ ಎರಡನೇ ವರದಿ, ಕರ್ನಾಟಕ ಕರ್ನಾಟಕ ವಿಧಾನಮಂಡಲದ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 2023-24ನೇ ಸಾಲಿನ 39ನೇ ವರದಿ, ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯ 2023-24ನೇ ಸಾಲಿನ ಮೊದಲನೇ ವರದಿ, ಕರ್ನಾಟಕ ವಿಧಾನಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2023-24ನೇ ಸಾಲಿನ ಮೂರನೇ ವರದಿ, ಹಾಗೂ 2023-24ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಮೂರನೇ ವರದಿ ಹಾಗೂ ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ವರದಿ ಮಂಡನೆಯಾಗಿವೆ ಎಂದು ವಿವರಿಸಿದರು.
ಕರ್ನಾಟಕ ವಿಧಾನಸಭೆಯ ನಿಯಮಾವಳಿ ಸಮಿತಿಯು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 212(1)ಕ್ಕೆ ತಿದ್ದುಪಡಿ ಮಾಡುವ ಸಂಬಂಧ ನಿಯಮಾವಳಿ ಸಮಿತಿಯ ಮಧ್ಯಂತರ ವರದಿಯನ್ನು ಜುಲೈ 24ರಂದು ಮಂಡಿಸಲಾಗಿದ್ದು, ಸದನವು ತಿದ್ದುಪಡಿಯನ್ನು ಅಂಗೀಕರಿಸಿದೆ. 2024-25ನೇ ಸಾಲಿನ ವಿಧಾನಮಂಡಲದ/ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಮಾನ್ಯ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲು ಜುಲೈ 25ರಂದು ಸದನವು ಮಾನ್ಯ ಸಭಾಧ್ಯಕ್ಷರಿಗೆ ಅಧಿಕಾರ ನೀಡಿದೆ. ಒಟ್ಟು 23 ಅಧಿಸೂಚನೆಗಳು ಮತ್ತು 146 ವಾರ್ಷಿಕ ವರದಿಗಳು, 160 ಲೆಕ್ಕಪರಿಶೋಧನಾ ವರದಿಗಳು, 05 ಅನುಪಾಲನಾ ವರದಿಗಳು, 04 ಅನುಸರಣಾ ವರದಿ ಹಾಗೂ 01 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.
ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕ ಸೇರಿದಂತೆ ಒಟ್ಟು 13 ವಿಧೇಯಕಗಳನ್ನು ಮಂಡಿಸಲಾಗಿದ್ದು, 12 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಉಳಿದಂತೆ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ಪರಿಶೀಲನೆಗಾಗಿ ಒಪ್ಪಿಸಲು ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಮತ್ತು ವಿಧಾನಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2024ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. ನಿಯಮ 60ರ ಅಡಿ ನೀಡಿದ್ದ 9 ಸೂಚನೆಗಳ ಪೈಕಿ 8ನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, 01 ಸೂಚನೆಯನ್ನು ತಿರಸ್ಕರಿಸಲಾಗಿದೆ. ಎರಡು ಸೂಚನೆಗಳನ್ನು ಚರ್ಚಿಸಲಾಗಿದೆ. ನಿಯಮ 69ರಡಿಯಲ್ಲಿ ಒಟ್ಟು 14 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 16 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. ಒಟ್ಟು 2370 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 117 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1,902 ಪ್ರಶ್ನೆಗಳ ಪೈಕಿ 1,438 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.