ಕರ್ನಾಟಕ

karnataka

ETV Bharat / state

ರಾಜಕೀಯ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ: ಸ್ಪೀಕರ್ ಯು.ಟಿ.ಖಾದರ್ - Speaker U T Khader

ವಿವಿಧ ಕ್ಷೇತ್ರಗಳಂತೆ ರಾಜಕೀಯ ಕ್ಷೇತ್ರದಲ್ಲಿ ವ್ಯಾಸಂಗ ಮಾಡಲು ಯಾವುದೇ ಸಂಸ್ಥೆಗಳಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜಕೀಯ ತರಬೇತಿ ಕೇಂದ್ರವನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

Speaker UT Khader
ಸ್ಪೀಕರ್ ಯು.ಟಿ.ಖಾದರ್

By ETV Bharat Karnataka Team

Published : Mar 6, 2024, 6:50 AM IST

Updated : Mar 6, 2024, 6:58 AM IST

ಬೆಂಗಳೂರು:ಉತ್ತಮ ರಾಜಕಾರಣಿಯಾಗಲು ಮುಂದಿನ ದಿನಗಳಲ್ಲಿ ರಾಜಕೀಯ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್​ ಹೇಳಿದರು. ಮಂಗಳವಾರ ವಿಕಾಸ ಸೌಧದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 'ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ವಕೀಲರು, ವೈದ್ಯರು, ಪತ್ರಕರ್ತರು ಸೇರಿದಂತೆ ಇತರೆ ಹಲವು ಕ್ಷೇತ್ರಗಳಿಗೆ ಕಾಲೇಜು ಹಾಗು ವಿಶ್ವವಿದ್ಯಾಲಯಗಳಿವೆ. ಆದರೆ, ಉತ್ತಮ ರಾಜಕಾರಣಿಯಾಗಲು ಯಾವುದೇ ಸಂಸ್ಥೆಗಳಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ರಾಜಕೀಯ ತರಬೇತಿ ಕೇಂದ್ರ ಪ್ರಾರಂಭಿಸುವ ಕುರಿತು ಚಿಂತನೆ ನಡೆದಿದೆ" ಎಂದರು.

ಸುಶಿಕ್ಷಿತರು ಮತ ಹಾಕುತ್ತಿಲ್ಲ: "ಸಮಾಜ ಸುಧಾರಣೆಗೆ ಉತ್ತಮ ರಾಜಕಾರಣಿಯನ್ನು ಆಯ್ಕೆ ಮಾಡುವ ಮೌಲ್ಯ ಮತದಾನಕ್ಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮತದಾನದ ಮಹತ್ವ ತಿಳಿದುಕೊಳ್ಳಬೇಕು. ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರಿಗೂ ಒಂದೇ ಮತದಾನದ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಶ್ರೀಮಂತರಿಗಿಂತ ಹೆಚ್ಚಾಗಿ ಬಡವರೇ ಮತದಾನ ಮಾಡುತ್ತಾರೆ. ಶಿಕ್ಷಣ ಪಡೆದವರು ಮತ ಹಾಕುವುದಿಲ್ಲ ಎನ್ನುವುದೇ ದುರದೃಷ್ಟಕರ ಸಂಗತಿ. ಯುವಜನಾಂಗವು ಮತದಾನ ಮೌಲ್ಯವನ್ನರಿತು ತಮ್ಮ ಹಕ್ಕು ಚಲಾಯಿಸಬೇಕು" ಎಂದು ಖಾದರ್ ಸಲಹೆ ನೀಡಿದರು.

"ಕಾನೂನು ವಿದ್ಯಾರ್ಥಿಗಳು ವಿಧಾನಸಭೆ ಕಲಾಪದ ತರಬೇತಿ ಪಡೆದಿರುವುದು ಸಂತಸ ವಿಷಯ. ಈ ತರಬೇತಿ ಒಂದಲ್ಲೊಂದು ದಿನ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಸಮರ್ಥ ನಾಯಕರಾಗಲು ಸಾಧ್ಯ" ಎಂದು ತಿಳಿಸಿದರು.

ಸದನದಲ್ಲಿ ಹಾಜರಾತಿ ಕುರಿತು ಖಾದರ್ ಹಾಸ್ಯ ಚಟಾಕಿ: "ಸದನದೊಳಗೆ ಹಾಜರಾತಿ ಸಂಖ್ಯೆ ಹೆಚ್ಚಿಸಲು ಬೆಳಗಿನ ಉಪಹಾರ, ಮಧ್ಯಾಹ್ನ ಊಟದ ಜತೆಗೆ ಸ್ವಲ್ಪ ಹೊತ್ತು ನಿದ್ದೆ ಮಾಡಲು ಹಾಸಿಗೆ ವ್ಯವಸ್ಥೆ ಮಾಡಬೇಕಿದೆ" ಎಂದು ಖಾದರ್ ಹಾಸ್ಯಚಟಾಕಿ ಹಾರಿಸಿದರು. "ಒಂದು ದಿನ ಶಾಸಕರಾದ ವಿದ್ಯಾರ್ಥಿಗಳಿಗೆ ಇಷ್ಟೊಂದು ಖುಷಿ ಇರುವಾಗ 5 ವರ್ಷ ಶಾಸಕರಾಗುವವರಿಗೆ ಎಷ್ಟು ಖುಷಿ ಇರುತ್ತದೆ?. ಆದರೆ, ಆ ಖುಷಿ ಸದನದೊಳಗೆ ಬರಲು ಇರಲ್ಲ. ಹೀಗಾಗಿ ಹಾಜರಾತಿ ಹೆಚ್ಚಿಸಲು ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ಕೆಲವರು ಊಟದ ನಂತರ ಅರ್ಧಗಂಟೆ ನಿದ್ದೆ ಬೇಕು ಎಂದು ಕೇಳಿದ್ದಾರೆ. ಸದನದ ಕೋರಂಗೆ 25 ಶಾಸಕರ ಅಗತ್ಯವಿದೆ. ಹೀಗಾಗಿ ಅಷ್ಟು ಪ್ರಮಾಣದಲ್ಲಿ ಹಾಸಿಗೆ ವ್ಯವಸ್ಥೆ ಮಾಡಬೇಕಾಗಿದೆ" ಎಂದು ಹಾಸ್ಯ ಮಾಡಿದರು.

ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಸಿದ್ದತೆ: ಹೆಚ್ಡಿಕೆ ನೇತೃತ್ವದಲ್ಲಿ ಎನ್​ಡಿಎ ನಾಯಕರ ಸಭೆ

Last Updated : Mar 6, 2024, 6:58 AM IST

ABOUT THE AUTHOR

...view details