ಚಿಕ್ಕೋಡಿ: ''ಅಥಣಿ ಹೊರವಲಯದ ಮದಭಾವಿ ರಸ್ತೆಗೆ ಹೊಂದಿಕೊಂಡಿರುವ ಚೌವ್ಹಾಣ್ ತೋಟದ ಮನೆಯೊಂದರಲ್ಲಿ ಬುಧವಾರ ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವಗಳು ದೊರೆತಿದ್ದು, ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಜೊಡಿ ಕೊಲೆ'' ಎಂದು ಬೆಳಗಾವಿ ಎಸ್ಪಿ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ.
ಅವರು ಗುರುವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ''ಬುಧವಾರದಂದು ಮದಭಾವಿ ರಸ್ತೆಯಲ್ಲಿ ನಾನಾಸಾಹೇಬ ಚೌವ್ಹಾಣ್ ಹಾಗೂ ಜಯಶ್ರೀ ನಾನಾ ಸಾಹೇಬ್ ಚೌವ್ಹಾಣ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹಗಳು ಸಂಪೂರ್ಣ ಕೊಳೆತು ಹೋಗಿದ್ದವು. ಮೈಮೇಲೆ ಆಗಿದ್ದ ಗಾಯಗಳು ಈ ವೇಳೆ ಕಂಡು ಬಂದಿರಲಿಲ್ಲ. ಕೆಲವರು ಮೃತ ದಂಪತಿಯ ಪುತ್ರನನ್ನು ಪೊಲೀಸರು ಬಂಧಿಸುವುದರಿಂದ ಮನನೊಂದು ನೇಣು ಅಥವಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಹುದೆಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಇದನ್ನು ಬದಿಗಿಟ್ಟು ಅಥಣಿ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ಹಾಗೂ ಎಫ್ಎಸ್ಎಲ್ ವರದಿಯ ಪ್ರಕಾರ ಇದೊಂದು ಜೋಡಿ ಕೊಲೆ ಎಂಬುದು ಗೊತ್ತಾಗಿದೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ಈ ಜೋಡಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ನಾಲ್ಕು ಜನರನ್ನು ವಿಚಾರಣೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಆರೋಪಿಗಳು ಪತ್ತೆಯಾಗಿಲ್ಲ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ'' ಎಂದು ತಿಳಿಸಿದ್ದಾರೆ.