ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸಂತ್ರಸ್ತೆಯರ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲ, ತಮ್ಮ ಬಳಿ ಇಟ್ಟುಕೊಳ್ಳುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ), ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿ ಅಶ್ಲೀಲ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ವ್ಯಕ್ತಿಗಳನ್ನು ಆ ಸಂದೇಶದ ರಚನಾಕಾರರು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾರಾದರೂ ತಮ್ಮ ಬಳಿ ಅಶ್ಲೀಲ ವಿಡಿಯೋ, ಫೋಟೋ ಹಾಗೂ ಧ್ವನಿ ರೂಪದಲ್ಲಿರುವ ಮುದ್ರಣಗಳನ್ನು ಹಂಚಿಕೊಳ್ಳುವುದಷ್ಟೇ ಅಲ್ಲದೇ, ತಮ್ಮ ಬಳಿ ಇಟ್ಟುಕೊಂಡಿದ್ದರೂ ಅದು ಅಪರಾಧವಾಗಿದೆ ಎಂದು ಎಸ್ಐಟಿ ತಿಳಿಸಿದೆ.
ಆದ್ದರಿಂದ ಯಾರಾದರೂ ಅಂಥವುಗಳನ್ನ ಮೊಬೈಲ್ ಅಥವಾ ಇತರ ಸಾಧನಗಳಲ್ಲಿ ಹೊಂದಿದ್ದರೆ ಡಿಲೀಟ್ ಮಾಡುವುದರಿಂದ ಕಾನೂನಿನ ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರಲಿದೆ ಎಂದು ವಿಶೇಷ ತನಿಖಾ ತಂಡ ಎಚ್ಚರಿಕೆ ನೀಡಿದೆ.