ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ತೇಜಾ ಹೇಳಿಕೆ ಬೆಂಗಳೂರು:2006ರ ಮುನ್ನ ನೇಮಕಾತಿ ಅಧಿಸೂಚನೆ ಹೊರಡಿಸಿದ ಬಳಿಕ ನೇಮಕವಾದ 13 ಸಾವಿರ ನೌಕರರನ್ನು ಹಳೆ ಪಿಂಚಣಿ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ನಮ್ಮ ಮುಖ್ಯ ಬೇಡಿಕೆ ಹೊಸ ಪಿಂಚಣಿ ಯೋಜನೆಯ (ಎನ್‌ಪಿಎಸ್) ರದ್ದತಿ. ಈ ಬಗ್ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರಿಂದ ಬೇಡಿಕೆ ಈಡೇರಿಸುವ ಆಶ್ವಾಸನೆ ದೊರೆತಿದೆ ಎಂದು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ತೇಜಾ ತಿಳಿಸಿದರು.
2006 ಏಪ್ರಿಲ್‌ಪೂರ್ವ ನೇಮಕಾತಿ ಅಧಿಸೂಚನೆಯಾಗಿ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಚುನಾವಣೆಗೂ ಪೂರ್ವದಲ್ಲಿ ಎನ್‌ಪಿಎಸ್ ನೌಕರರು ಮುಷ್ಕರ ಮಾಡುವ ವೇಳೆ ಸ್ಥಳಕ್ಕೆ ಭೇಟಿ ನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದು ಆದೇಶ ಪ್ರತಿಯ ಜೊತೆಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಿದ್ದರಾಮಯ್ಯ ಬರೆದುಕೊಂಡಿದ್ದರು.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ ಶಾಂತರಾಮ ತೇಜಾ, 13 ಸಾವಿರ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಈ ಬಗ್ಗೆ ಸುಪ್ರೀಂಕೋರ್ಟ್ ಹೊರಡಿಸಿದ್ದ ಸುತ್ತೋಲೆ ಅನ್ವಯದಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸಾಮಾನ್ಯ ಬೆಳವಣಿಗೆಯಾಗಿದೆ. ಚುನಾವಣೆ ಪೂರ್ವ ರಾಜ್ಯದಲ್ಲಿರುವ 2.50 ಲಕ್ಷ ನೌಕರನ್ನು ಎನ್ಪಿಎಸ್ಯಿಂದ ಹಳೆ ಪಿಂಚಣಿ (ಒಪಿಎಸ್) ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿ ಸಂಘದಿಂದ ಪ್ರತಿಭಟನೆ ಮಾಡಲಾಗಿತ್ತು. ಇದೀಗ 13 ಸಾವಿರ ನೌಕರರಿಗೆ ಮಾತ್ರ ಹಳೆ ಪಿಂಚಣಿ ವ್ಯಾಪ್ತಿಗೆ ತರಲಾಗಿದೆ. ಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು ಹೆಚ್ಚುಗಾರಿಕೆ ಇಲ್ಲ ಎಂದರು.
ಎನ್‌ಪಿಎಸ್ ರದ್ದುಪಡಿಸುವ ಸಂಬಂಧ ಹಾಗೂ ನಮ್ಮ ಬೇಡಿಕೆ ಬಗ್ಗೆ ತಿಳಿ ಹೇಳಲು ಸಂಘದ ನಿಯೋಗದೊಂದಿಗೆ ಮೈಸೂರಿನಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿದೆ. ಚುನಾವಣಾಪೂರ್ವ ನೀಡಿದ ಭರವಸೆಗೆ ಬದ್ದನಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಎಂ ಆಶ್ವಾಸನೆ ನೀಡಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಸುಮಾರು 15 ಮಂದಿ ಕ್ಯಾಬಿನೆಟ್ ಸಚಿವರನ್ನು ಭೇಟಿ ಮಾಡಿದ್ದು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತಕ ವರ್ಷದ ಬಜೆಟ್ನಲ್ಲಿ ಎನ್‌ಪಿಎಸ್ ಯೋಜನೆ ರದ್ದು ಮಾಡುವ ಬಗ್ಗೆ ಘೋಷಿಸುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ನೌಕರರಿಗೆ ಖುಷಿ ಸುದ್ದಿ: ಎನ್ಪಿಎಸ್ನಲ್ಲಿದ್ದ 13 ಸಾವಿರ ರಾಜ್ಯ ಸರಕಾರಿ ನೌಕರರಿಗೆ ಹಳೆ ಪಿಂಚಣಿ ಭಾಗ್ಯ: ಹಣಕಾಸು ಇಲಾಖೆ ಆದೇಶ