ಕರ್ನಾಟಕ

karnataka

ETV Bharat / state

ಡೊನೇಶನ್ ಪಡೆದರೆ‌ ಶಾಲೆಗಳ ನೋಂದಣಿ ರದ್ದು: ಬೆಳಗಾವಿ ಡಿಸಿ ಎಚ್ಚರಿಕೆ - Belagavi DC Warning - BELAGAVI DC WARNING

ಅನುದಾನರಹಿತ ಅಥವಾ ಅನುದಾನಿತ ಶಾಲೆಗಳಲ್ಲಿ ನಿಯಮಾನುಸಾರ ಸರಕಾರ ನಿಗದಿಪಡಿಸಿದ ಶುಲ್ಕಗಳನ್ನು ಮಾತ್ರ ಪಡೆದು ಪ್ರವೇಶ ಕಲ್ಪಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಡಿಸಿ ನಿತೇಶ್ ಪಾಟೀಲ
ಬೆಳಗಾವಿ ಡಿಸಿ ನಿತೇಶ್ ಪಾಟೀಲ (ETV Bharat)

By ETV Bharat Karnataka Team

Published : May 29, 2024, 11:32 AM IST

ಬೆಳಗಾವಿ:ಜಿಲ್ಲೆಯ ಅನುದಾನರಹಿತ ಅಥವಾ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಯಾವುದೇ ರೀತಿಯ ಡೊನೇಶನ್ ಪಡೆಯುವಂತಿಲ್ಲ. ಒಂದು ವೇಳೆ ಕಾನೂನುಬಾಹಿರವಾಗಿ ಡೊನೇಶನ್ ಪಡೆದಿರುವುದು ಕಂಡುಬಂದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವು ಶಾಲೆಗಳಲ್ಲಿ ಡೊನೇಶನ್ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ನಿಯಮಾನುಸಾರ ಸರಕಾರ ನಿಗದಿಪಡಿಸಿದ ಶುಲ್ಕಗಳನ್ನು ಮಾತ್ರ ಪಡೆದುಕೊಂಡು ಪ್ರವೇಶ ನೀಡಬೇಕು. ಒಂದು ವೇಳೆ ಕಾನೂನುಬಾಹಿರವಾಗಿ ಡೊನೇಶನ್ ಪಡೆದರೆ ಆರ್‌ಟಿ‌ಇ ಕಾಯ್ದೆ ಪ್ರಕಾರ ಅಂತಹ ಶಾಲೆಗಳ ನೋಂದಣಿ ರದ್ದುಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್ -2(ಬಿ)ರಂತೆ ಎಲ್ಲಾ ಖಾಸಗಿ ಶಾಲೆಗಳು ತಾವು ಅಧಿಸೂಚಿಸಿದ ಶುಲ್ಕವನ್ನು ತಮ್ಮ ಶಾಲೆಯ ಅಂತರ್ಜಾಲ ತಾಣ, ಶಾಲಾ ನೋಟಿಸ್ ಬೋರ್ಡ್ ಹಾಗೂ ಇಲಾಖೆಯ ಅಂತರ್ಜಾಲ(ಎಸ್.ಎ.ಟಿ.ಎಸ್)ದಲ್ಲಿ ಪೋಷಕರು ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಇದರಿಂದ ಪಾಲಕರು ಹಾಗೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕದ ಬಗ್ಗೆ ಮಾಹಿತಿ ಲಭಿಸುವುದರಿಂದ ಪ್ರವೇಶ ಪ್ರಕ್ರಿಯೆ ಕುರಿತ ಗೊಂದಲ ಪರಿಹರಿಸಬಹುದು. ಪಾಲಕರು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರತಿಯೊಂದು ಶಾಲೆಯೂ ತನ್ನ ಸೂಚನಾ ಫಲಕದಲ್ಲಿ ಪ್ರವೇಶ ಶುಲ್ಕ ಕುರಿತು ಸ್ಪಷ್ಟ ಮಾಹಿತಿ ಪ್ರದರ್ಶಿಸಬೇಕು ಎಂದು ಡಿಸಿ ತಿಳಿಸಿದ್ದಾರೆ.

ದೂರು ಸಲ್ಲಿಸಲು ಮನವಿ: ಜಿಲ್ಲೆಯಲ್ಲಿ ಯಾವುದೇ ಶಾಲೆ ಡೊನೇಶನ್ ಕೇಳಿದರೆ ಅಥವಾ ಡೊನೇಶನ್ ಪಡೆದುಕೊಂಡರೆ ಕೂಡಲೇ ಜಿಲ್ಲಾಧಿಕಾರಿ ಕಚೇರಿ ಅಥವಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ(ಡಿಡಿಪಿಐ) ಕಚೇರಿಗೆ ಸಾರ್ವಜನಿಕರು ದೂರು ಸಲ್ಲಿಸಬಹುದು. ಈ ದೂರು ಆಧರಿಸಿ ಸಂಬಂಧಿಸಿದ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:ಬೆಳ್ಳಂ ಬೆಳಗ್ಗೆ ದಾಳಿ: ಬೆಳಗಾವಿ ಪಾಲಿಕೆ ಅಧಿಕಾರಿಗಳ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು - Lokayukta officials Raid

ABOUT THE AUTHOR

...view details