ಬೆಂಗಳೂರು: ನಿನ್ನೆ ನಡೆದ ಘಟನೆಗಳ ರೂವಾರಿ ಯಾರೆಂದು ಮಾಧ್ಯಮದವರೇ ನನಗೆ ತಿಳಿಸಬೇಕು. ನನಗಂತೂ ದಿಗ್ಭ್ರಮೆಯಾಗಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದ್ದು, ನಿನ್ನೆ ನಡೆದ ರಾಜೀನಾಮೆ ಪ್ರಸಂಗದ ಕುರಿತು ಚರ್ಚಿಸಲಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಸರಿ ಸುಮಾರು 40 ವರ್ಷಗಳಿಂದ ಸತತವಾಗಿ ರಾಜಕೀಯ ಮಾಡಿದ್ದು, ಪಕ್ಷ 10 ವರ್ಷಗಳ ಕಾಲ ಕೇಂದ್ರದಲ್ಲಿ ಸಚಿವನನ್ನಾಗಿಸಿದೆ. ಕಾಂಗ್ರೆಸ್‌ನ ಹೈಕಮಾಂಡ್ ನೀಡುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ. ಬುಧವಾರ ನಡೆದಿರುವ ರಾಜೀನಾಮೆ ಪ್ರಹಸನ ನನಗೆ ಆಶ್ಚರ್ಯ ಉಂಟುಮಾಡಿದೆ. ಈ ರಾಜೀನಾಮೆ ಎಂಬುದು ನಾಟಕ ಆಗಿದೆ. ಯಾರು ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಕೇಂದ್ರ ಮಟ್ಟದಲ್ಲಿ ರಾಜಕಾರಣ ಮಾಡಿರುವ ನಾಯಕ, ನಮ್ಮ ಪಕ್ಷದಲ್ಲಿರುವ ನಾಯಕರ ಕುಟುಂಬದ ಹಲವರಿಗೆ ಟಿಕೆಟ್ ಸಿಕ್ಕಿದೆ. ಸಹಜವಾಗಿ ನಾನೂ ನನ್ನ ಕುಟುಂಬದವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದು, ಟಿಕೆಟ್ ದೊರಕುವ ಆಶಾಭಾವನೆ ಇದೆ. ಕೋಲಾರ ಲೋಕಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಮುಖ್ಯಮಂತ್ರಿಗಳಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ್ದೇನೆ ಎಂದು ವಿವರಿಸಿದರು.