ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 7ನೇ ಆರೋಪಿಯಾಗಿರುವ ಅನುಕುಮಾರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಇಂದು ಬಿಡುಗಡೆಯಾಗಿದ್ದಾರೆ. ಕಳೆದ ಶುಕ್ರವಾರ (ಡಿ.15) ಅನುಕುಮಾರ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅನುಕುಮಾರ್ ಅವರನ್ನು ಇಂದು ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾದ ಅನುಕುಮಾರ್ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಹೊರಬಂದಿದ್ದಾರೆ. ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕಾರಾಗೃಹಕ್ಕೆ ವರ್ಗಾವಣೆಯಾಗುವಾಗ ನಟ ದರ್ಶನ್ ನೀಡಿದ್ದ ಭಗವದ್ಗೀತೆ ಪುಸ್ತಕದೊಂದಿಗೆ ಕಾಲ ಕಳೆದಿದ್ದ ಅನುಕುಮಾರ್, ಅದೇ ಪುಸ್ತಕ ಹಿಡಿದು ಹೊರಬಂದಿದ್ದು ಬಳಿಕ ತನ್ನ ಸಹೋದರನೊಂದಿಗೆ ತೆರಳಿದ್ದಾನೆ.
ಜೈಲಿನಿಂದ ಹೊರಬಂದ ಅನುಕುಮಾರ್ (ETV Bharat) ದರ್ಶನ್ ಮತ್ತು ಸಹಚರರಿಂದ ಹತ್ಯೆಯಾದ ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಅನುಕುಮಾರ್ ಅವರನ್ನು ಬಂಧಿಸಿದ್ದರು.
ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಆರೋಪಿ ಜಗದೀಶ್ ಬಿಡುಗಡೆ:ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಗ್ಯಾಂಗ್ನ ಆರನೇ ಆರೋಪಿ ಜಗದೀಶ್ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬುಧವಾರ ಸಂಜೆ ಬಿಡುಗಡೆ ಆಗಿದ್ದಾರೆ. ಕಳೆದ ವಾರವೇ ಹೈಕೋರ್ಟ್ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.
ಆರೋಪಿ ಜಗದೀಶ್ ಬಿಡುಗಡೆ (ETV Bharat) ಆದರೆ, ಜಗದೀಶ್ಗೆ ಕೋರ್ಟ್ ಪ್ರಕ್ರಿಯೆ ಪೂರ್ಣವಾಗದ ಕಾರಣ ಜೈಲಿನಿಂದ ಬಿಡುಗಡೆ ತಡವಾಗಿತ್ತು. ಬುಧವಾರ ಬೆಳಗ್ಗೆ ಬೆಂಗಳೂರಿನ ಕೋರ್ಟ್ನಲ್ಲಿ ಜಾಮೀನು ಪ್ರಕ್ರಿಯೆ ಮುಗಿದಿದ್ದರಿಂದ ಸಂಜೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಜಗದೀಶ್ ಬಿಡುಗಡೆಯ ಪತ್ರ ಇಮೇಲ್ನಲ್ಲಿ ಬಂದ ಕಾರಣಕ್ಕೆ ಸಂಜೆಯೇ ಜಗದೀಶ್ ಅವರನ್ನು ಬಿಡುಗಡೆ ಮಾಡಲಾಯಿತು.
ಜೈಲಿನಿಂದ ಹೊರಬಂದ ಆರೋಪಿ ಜಗದೀಶ್ (ETV Bharat) ಜಗದೀಶ್ ಬಿಡುಗಡೆ ಆಗುತ್ತಿದ್ದಂತೆಯೇ ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಯತ್ನ ಮಾಡಿದರು. ನಂತರ ತಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದ ಕಾರನ್ನು ಹತ್ತಿ ಚಿತ್ರದುರ್ಗಕ್ಕೆ ತೆರಳಿದರು. ಜಗದೀಶ್ ಅವರನ್ನು ಕರೆದುಕೊಂಡು ಹೋಗಲು ಅವರ ಸಹೋದರಿ ಬಂದಿದ್ದರು. ಮಂಗಳವಾರ ಆರೋಪಿ ಲಕ್ಷ್ಮಣ್ ಬಿಡುಗಡೆ ಆಗಿದ್ದರು.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ, ಲಕ್ಷ್ಮಣ್ ಜೈಲಿನಿಂದ ಬಿಡುಗಡೆ