ಬೆಂಗಳೂರು:ಬೆಂಗಳೂರಿನಿಂದ 45 ಕಿಮೀ ದೂರ ಇರುವ ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿ, ಗ್ರೇಟರ್ ಬೆಂಗಳೂರು ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ಜಿಲ್ಲೆಗೆ ಹೆಸರು ಬದಲಾವಣೆ ಮಾಡುವ ಪ್ರಸ್ತಾವನೆ ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು.
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಸರ್ಕಾರದ ನಿರ್ಧಾರವು ಮುಂದಿನ ಪೀಳಿಗೆಗೆ ಹೊಸ ದಿಕ್ಕನ್ನು ನೀಡಲು ಮತ್ತು ಜಿಲ್ಲೆಯನ್ನು ಬ್ರಾಂಡ್ ಬೆಂಗಳೂರಿನಡಿ ತರುವ ಯತ್ನವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ, ಇದಕ್ಕೆ ಪರ - ವಿರೋಧವೂ ವ್ಯಕ್ತವಾಗಿದೆ.
ರಾಮನಗರ ಜಿಲ್ಲೆಗೆ ಮರುನಾಮಕರಣ ಏಕೆ?
- ರಾಮನಗರ ಜಿಲ್ಲೆಯ ಬದಲು ಬೆಂಗಳೂರು ದಕ್ಷಿಣ ಎಂದು ಕರೆಯಲು ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದರಿಂದ ರಾಜ್ಯ ಸಚಿವ ಸಂಪುಟ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವ ತೀರ್ಮಾನ ಕೈಗೊಂಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್, ರಾಮನಗರಕ್ಕೂ ಮರುನಾಮಕರಣ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಿಸಿದರು.
- ಕಂದಾಯ ಇಲಾಖೆ ಶೀಘ್ರದಲ್ಲೇ ಇದರ ಪ್ರಕ್ರಿಯೆ ಆರಂಭಿಸಲಿದೆ. ರಾಮನಗರ ತಾಲೂಕು ಕೇಂದ್ರ ಸ್ಥಾನವಾಗಿ ಕಾರ್ಯನಿರ್ವಹಿಸಲಿದೆ. ಮರುನಾಮಕರಣಗೊಂಡ ಜಿಲ್ಲೆಯು ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯು ಸಂಚಾರ ದಟ್ಟಣೆ ಮತ್ತು ಮಾಲಿನ್ಯಕ್ಕೆ ಕುಖ್ಯಾತಿಯಾಗಿದೆ. ಮರುನಾಮಕರಣದ ಬಳಿಕ ರಾಮನಗರವು ಬೆಂಗಳೂರು ವ್ಯಾಪ್ತಿಗೆ ಸೇರಿ ಶೀಘ್ರವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದರು.
- ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ನೆಲಮಂಗಲ, ಆನೇಕಲ್, ಹೊಸಕೋಟೆ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳನ್ನು ಒಟ್ಟುಗೂಡಿಸಿ ಮೂಲ ಬೆಂಗಳೂರು ಜಿಲ್ಲೆಯನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.
- ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳನ್ನು ಸೇರಿಸಿ 1986 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಯಿತು. ಉಳಿದ ತಾಲ್ಲೂಕುಗಳು ಬೆಂಗಳೂರು ನಗರ ಜಿಲ್ಲೆಗೆ ಸೇರ್ಪಡೆ ಮಾಡಲಾಯಿತು. ಬಳಿಕ 2007 ರಲ್ಲಿ ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ರಾಮನಗರವನ್ನು ಒಟ್ಟುಮಾಡಿ ಅದಕ್ಕೆ ರಾಮನಗರ ಜಿಲ್ಲೆ ಎಂದು ರಚಿಸಲಾಗಿತ್ತು. ಇದನ್ನು ಈಗ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ.
- ಮರುನಾಮಕರಣಕ್ಕೆ ಜಿಲ್ಲೆಯ ಜನರ ಬೆಂಬಲವಿದೆ. ಬೆಂಗಳೂರಿನ ಜಾಗತಿಕ ಖ್ಯಾತಿ, ಸಾರ್ವಭೌಮತ್ವ ಮತ್ತು ಕೀರ್ತಿಯು ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳಿಗೂ ಪ್ರಯೋಜನವಾಗಲಿದೆ. ಬೆಂಗಳೂರಿನ ವ್ಯಾಪ್ತಿಯು ತುಮಕೂರು, ರಾಮನಗರ ಜಿಲ್ಲೆಗೆ ತಾಗಿವೆ. ಈ ಪ್ರದೇಶಗಳು ರಾಜಧಾನಿಗೆ ಸೇರಿದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಗಡಿ ಭಾಗದಲ್ಲಿರುವ ಪ್ರದೇಶಗಳೂ ಅಭಿವೃದ್ಧಿ ಹೊಂದಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯ.
- ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆ ರಚನೆಯಾದಾಗ ಹೆಚ್ಡಿಕೆ ಸಿಎಂ ಆಗಿದ್ದರು. ಜೆಡಿಎಸ್ನ ಭದ್ರಕೋಟೆಯಾಗಿರುವ ಚನ್ನಪಟ್ಟಣ ಉಪಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಮರುನಾಮಕರಣ ಮಾಡುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.