ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪ ಸತ್ಯಕ್ಕೆ ದೂರವಾಗಿದೆ. ಘಟನೆ ನಡೆದ ನಾಲ್ಕು ವರ್ಷಗಳ ಬಳಿಕ ದೂರು ನೀಡಲಾಗಿದೆ. ಘಟನೆ ನಡೆದಿದೆ ಎಂದು ಊಹೆ ಮಾಡಿಕೊಂಡರೂ, ಅದೊಂದು ಒಪ್ಪಿತ ಕ್ರಿಯೆ ಎಂದು ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ತಮ್ಮ ವಿರುದ್ಧ ಮನೆ ಕೆಲಸದ ಮಹಿಳೆ ಹಾಗೂ ಇತರ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಸಂಬಂಧ ಎರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಮತ್ತು ಒಂದು ಪ್ರಕರಣದಲ್ಲಿ ರೆಗ್ಯೂಲರ್ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು.
ವಾದ ಮಂಡಿಸಿದ ವಕೀಲರು, ''ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೆ ಸಂತ್ರಸ್ತೆ ಮಹಿಳೆ ಮೊದಲು ಅರ್ಜಿದಾರರ ತಂದೆ (ಹೆಚ್.ಡಿ.ರೇವಣ್ಣ) ವಿರುದ್ಧ ಅತ್ಯಾಚಾರ ಆರೋಪದಲ್ಲಿ ದೂರು ದಾಖಲಿಸಿದ್ದರು. ತನಿಖಧಿಕಾರಿಗಳ ಮುಂದೆ ಮುಂದುವರೆದ ಹೇಳಿಕೆ ನೀಡುವ ಸಂದರ್ಭದಲ್ಲಿ ಅರ್ಜಿದಾರರ (ಪ್ರಜ್ವಲ್ ರೇವಣ್ಣ) ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ನಾಲ್ಕು ವರ್ಷಗಳ 2020ರಲ್ಲಿ ನಡೆದಿರುವ ಘಟನೆ ಸಂಬಂಧಿಸಿದಂತೆ 2024ರಲ್ಲಿ ದೂರು ನೀಡಲಾಗಿದೆ. ಇಷ್ಟು ವಿಳಂಬ ಏಕೆ ಮಾಡಲಾಗಿದೆ'' ಎಂದು ಪ್ರಶ್ನಿಸಿದರು.
ಇದಕ್ಕೆ ಪೀಠ, ''ಘಟನೆ ನಡೆದೇ ಇಲ್ಲವೇ?'' ಎಂದು ಪ್ರಶ್ನಿಸಿತು. ಈ ವೇಳೆ ವಕೀಲರು, ''ಅದು ನಮ್ಮ ವಾದವಲ್ಲ. ಘಟನೆ ನಡೆದಿದ್ದರೆ ಅದು ಒಪ್ಪಿತ ಲೈಂಗಿಕ ಕ್ರಿಯೆ ಆಗಿರಲಿದೆ'' ಎಂದು ವಾದ ಮಂಡಿಸಿದರು.
''ಅಲ್ಲದೆ, ದೂರುದಾರ ಮಹಿಳೆ, ಪ್ರಜ್ವಲ್ ರೇವಣ್ಣ ಅವರ ತಾಯಿಯ ಸಂಬಂಧಿಯಾಗಿದ್ದು, ತಂದೆ ಉದ್ಯೋಗ ನೀಡಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ನಮ್ಮೊಂದಿಗೆ ಕೆಲಸದಲ್ಲಿದ್ದು, ಈ ಸಂದರ್ಭದಲ್ಲಿ ನಮ್ಮ ವಿರುದ್ಧ ಯಾವುದೇ ಆರೋಪ ಮಾಡಿರಲಿಲ್ಲ. ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಇದೀಗ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ'' ಎಂದು ತಿಳಿಸಿದರು.
''ನಾಲ್ಕು ವರ್ಷಗಳ ಕಾಲ ಸುಮ್ಮನಿದ್ದ ಮಹಿಳೆ ಚುನಾವಣೆಗೂ ಒಂದು ದಿನ ಮುನ್ನ ದೂರು ನೀಡಿದ್ದಾರೆ. ಅದಕ್ಕೆ ತನ್ನ ಪತಿ ಪ್ರಶ್ನೆ ಮಾಡಿರುವುದಾಗಿ, ಬಳಿಕ ಮಾಧ್ಯಮಗಳ ಮುಂದೆ ಹೋಗಿದ್ದಾಗಿ ತಿಳಿಸಿದ್ದಾರೆ. ದೂರಿನಲ್ಲಿ ಮೊದಲು ಅರ್ಜಿದಾರರ ತಂದೆ ಹೆಸರನ್ನು ಹೇಳಿ, ಬಳಿಕ ಅರ್ಜಿದಾರರನ್ನು ಸೇರಿಸಿದ್ದಾರೆ. ಜೊತೆಗೆ, ವಿಡಿಯೋ ಸಂಬಂಧ ಎಫ್‌ಎಸ್‌ಎಲ್ ನೀಡಿರುವ ವರದಿಗಳು ಆರೋಪಕ್ಕೆ ಹೊಂದಾಣಿಕೆಯಾಗುತ್ತಿಲ್ಲ'' ಎಂದು ಪೀಠಕ್ಕೆ ವಿವರಿಸಿದರು.
''ಅಲ್ಲದೆ, ಘಟನೆ 2020ರಲ್ಲಿ ನಡೆದಿದ್ದರೂ, 2024ರ ಮೇ 1ರ ವರೆಗೂ ಅತ್ಯಾಚಾರ ಆರೋಪ ಮಾಡಿರಲಿಲ್ಲ. ಇದಕ್ಕೆ ಅರ್ಜಿದಾರರು ಪ್ರಭಾವಿಗಳು ಎಂದು ದೂರು ನೀಡಿಲ್ಲ ಎನ್ನಬಹುದು. ಆದರೆ, ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ. ತಮಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಬಹುದಾಗಿತ್ತು'' ಎಂದು ನಾವದಗಿ ತಿಳಿಸಿದರು.
''ಅರ್ಜಿದಾರ ಪ್ರಜ್ವಲ್ ಅವರ ಫೋನಿನಿಂದ ಯಾವುದೇ ವಿಡಿಯೋ ಸಂಗ್ರಹ ಮಾಡಿಲ್ಲ. ಬದಲಾಗಿ ಅವರ ಕಾಲು ಚಾಲಕ (ಕಾರ್ತಿಕ್) ಅವರನ್ನು ವಿಚಾರಣೆ ನಡೆಸಿ ಅವರ ಫೋನಿನಲ್ಲಿದ್ದ ಕೆಲವು ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಪಡೆದುಕೊಳ್ಳಲಾಗಿದೆ. ಆದರೆ, ಆ ಫೋನ್ ಪ್ರಜ್ವಲ್ ಅವರದು ಎಂಬುದಾಗಿ ಚಾಲಕ ಹೇಳಿಕೆ ನೀಡಿದ್ದಾರೆ. ಆದರೆ, ಎಫ್‌ಎಸ್‌ಎಸಲ್ ವರದಿಯಲ್ಲಿ ಇದು ದೃಢಪಟ್ಟಿಲ್ಲ. ಅಲ್ಲದೆ, ಫೋನ್ ಅನ್ನು ಏಪ್ರಿಲ್ 30ರಂದು ವಶಕ್ಕೆ ಪಡೆದುಕೊಂಡಿದ್ದ ಮೇ 30ರಂದು ತನಿಖೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ಫೋನ್‌ನಲ್ಲಿದ್ದ ಮಾಹಿತಿಗಳನ್ನು ತಿರುಚುವ ಸಾಧ್ಯತೆಯಿದೆ. ಅಷ್ಟಕ್ಕೂ ಫೋನ್ ಚಾಲಕನದ್ದಾಗಿದ್ದು, ಇದಕ್ಕೂ ಪ್ರಜ್ವಲ್‌ಗೂ ಸಂಬಂಧವಿಲ್ಲ'' ಎಂದು ವಿವರಿಸಿದರು.
''ಜೊತೆಗೆ, ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಪ್ರಜ್ವಲ್ ಅವರನ್ನು ಆರೋಪಿಯನ್ನಾಗಿಸಲಾಗಿದೆ. ಇದರಲ್ಲಿ ಪ್ರಜ್ವಲ್ ಪಾತ್ರವಿಲ್ಲ. ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ'' ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹೇಳಿದರು.
ಆಗ, ''ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡುವ ಮೂಲಕ ಮಹಿಳೆಗೆ ಕಳಂಕ ಉಂಟು ಮಾಡಿರುವುದು ಅತ್ಯಂತ ಹೀನಾಯ ಕೃತ್ಯ. ಅಶ್ಲೀಲ ವಿಡಿಯೋ ಹಂಚಿಕೆಗೆ ಸಂಬಂಧಿಸಿದ ಪ್ರಕರಣವನ್ನು ಏಕೆ ವಿಚಾರಣೆಗೆ ಪಟ್ಟಿ ಮಾಡಿಲ್ಲ'' ಎಂದ ಪೀಠವು, ''ಅದನ್ನು ಮುಂದಿನ ವಿಚಾರಣೆಗೆ ಪಟ್ಟಿ ಮಾಡಿ'' ಎಂದು ನ್ಯಾಯಾಲಯ ಅಧಿಕಾರಿಗಳಿಗೆ ಸೂಚನೆ ನೀಡಿತು.
ಪ್ರಕರಣ ಸಂಬಂಧ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿರುವ ಹಿರಿಯ ವಕೀಲ ಪ್ರೋ.ರವಿವರ್ಮಕುಮಾರ್ ವಾದ ಮಂಡಿಸಿ, ''ಪ್ರಾರಂಭದಲ್ಲಿ ರೇವಣ್ಣ ವಿರುದ್ಧ ದೂರು ನೀಡಲಾಗಿದೆ. ಬಳಿಕ ಬಳಿಕ ಅರ್ಜಿದಾರರ ವಿರುದ್ಧದ ಆರೋಪ ಪ್ರಾರಂಭವಾಗಿದೆ'' ಎಂದರು.
ದೂರು ನೀಡಲು ವಿಳಂಬವಾಗಿದೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ರವಿವರ್ಮಕುಮಾರ್, ''ಸಂತ್ರಸ್ತೆ ಮಹಿಳೆಗೆ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿತ್ತು. ಇದೇ ಕಾರಣದಿಂದ ಪ್ರಕರಣ ಸಂಬಂಧ ಮುಂದುವರೆದ ಹೇಳಿಕೆ ನೀಡುವ ಸಂದರ್ಭದಲ್ಲಿ ಅರ್ಜಿದಾರರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ಎಲ್ಲಿಯಾದರೂ ಮಾತನಾಡಿದಲ್ಲಿ ಸಂತ್ರಸ್ತೆಯ ಗಂಡನ ಕೊಲೆ ಮಾಡುವುದಾಗಿ, ಆಕೆಯ ಮಗಳಿಗೂ ಇದೇ ರೀತಿ ತೊಂದರೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ದೂರು ನೀಡಲು ವಿಳಂಬವಾಗಿದ್ದು, ವಿಳಂಬಕ್ಕೆ ಸವಿವರವಾದ ಕಾರಣವನ್ನು ನೀಡಲಾಗಿದೆ'' ಎಂದು ತಿಳಿಸಿದರು.
''ಅಲ್ಲದೆ, ಅರ್ಜಿದಾರರ ಮಗಳೊಂದಿಗೆ ಆರೋಪಿ ಮಾತನಾಡಿರುವುದನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿದ್ದು, ಅದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ. ಜೊತೆಗೆ, ಅರ್ಜಿದಾರರು ದೂರು ದಾಖಲಾದ ಹಾಗೂ ಚುನಾವಣೆ ನಡೆದ ಮರುದಿನವೇ ದೇಶವನ್ನು ತೊರೆದಿದ್ದಾರೆ. ಅವರು ಬಳಕೆ ಮಾಡುತ್ತಿದ್ದ ಫೋನ್ ಅನ್ನು ವಿಚಾರಣೆಗೆ ಮತ್ತು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕಾಗಿದೆ. ಆದರೆ, ಈವರೆಗೂ ಫೋನ್‌ಅನ್ನು ತನಿಖಾಧಿಕಾರಿಗಳಿಗೆ ನೀಡಿಲ್ಲ'' ಎಂದು ಅವರು ವಿವರಿಸಿದರು. ವಾದ ಆಲಿಸಿದ ಪೀಠ ಆದೇಶವನ್ನು ಕಾಯ್ದಿರಿಸಿತು.
ಪ್ರಕರಣದ ಹಿನ್ನೆಲೆ: ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಅವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ ದೂರಿನ ಅನ್ವಯ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಆನಂತರ ಅತ್ಯಾಚಾರ ಆರೋಪ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕೇಂದ್ರ ಸಚಿವರ ವಿರುದ್ಧ FIR ದಾಖಲು - FIR Against Union Minister