ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಎನ್ಎಸ್ಜಿ ಕಮಾಂಡೋ ತಂಡ ಆಗಮಿಸಿ ಕೂಲಂಕಶವಾಗಿ ಪರಿಶೀಲನೆ ನಡೆಸುತ್ತಿದೆ. ಬಾಂಬ್ ನಿಷ್ಕ್ರಿಯ ದಳದ ಜೊತೆ ಎನ್ಎಸ್ಜಿ ಹೊಟೇಲ್ ಹಾಗೂ ಸುತ್ತಮುತ್ತ ಕಡೆಗಳಲ್ಲಿ ತಪಾಸಣೆ ನಡೆಸುತ್ತಿದೆ.
ಮತ್ತೊಂದಡೆ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರಕರಣದ ಸಂಬಂಧ ರಚಿಸಲಾಗಿರುವ 8 ವಿಶೇಷ ತಂಡಗಳು ತನಿಖೆ ನಡೆಸುತ್ತಿವೆ. ಇನ್ನೊಂದೆಡೆ ಎನ್ಐಎ ತನ್ನದೇ ಶೈಲಿಯಲ್ಲಿ ಇನ್ವೆಸ್ಟಿಗೇಷನ್ ಮಾಡುತ್ತಿದೆ.
ಆರೋಪಿಯ ಟ್ರಾವೆಲ್ ಹಿಸ್ಟರಿ ಪತ್ತೆ ಕಾರ್ಯ ಚುರುಕು:ಬಾಂಬ್ ಸ್ಫೋಟಕ್ಕೂ ಮುನ್ನ ಶಂಕಿತ ಬ್ಯಾಗ್ ಸಮೇತ ಓಡಾಡಿದ್ದು, ಸಿಸಿಟಿವಿಯಲ್ಲಿ ಆತನ ಚಹರೆ ಪತ್ತೆಯಾಗಿದೆ. ಆದರೆ ಮುಖ ಕಾಣದಂತೆ ಕ್ಯಾಪ್ ಧರಿಸಿ ಓಡಾಡಿದ್ದು ಕಂಡು ಬಂದಿದೆ. ಶಂಕಿತ ಎಲ್ಲಿಂದ ಬಂದಿದ್ದಾನೆ ಹಾಗೂ ಬಾಂಬ್ ಇಟ್ಟು ಎಲ್ಲಿಗೆ ತೆರಳಿದ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತ ಉಳಿದುಕೊಂಡಿದ್ದ ಸ್ಥಳ, ಓಡಾಟ ನಡೆಸಿರುವ ರಸ್ತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಎನ್ಐಎಗೆ ಹಸ್ತಾಂತರಿಸುವ ಸಾಧ್ಯತೆ:ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ಸಾಧ್ಯತೆ ದಟ್ಟವಾಗಿದೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಇಲ್ಲಿನ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಕಂಡು ಬಂದಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.