ಬೆಳಗಾವಿ : ''ಡಿ ಕೆ ಶಿವಕುಮಾರ್ ಮಹಾನಾಯಕ ಅಲ್ಲ, ಆತ ಸಿಡಿ ಶಿವು. ಮಹಾನಾಯಕ ಎಂದರೆ ಅಂಬೇಡ್ಕರ್‌ಗೆ ಅವಮಾನ ಆಗುತ್ತದೆ. ಹೀಗಾಗಿ ನಾನು ಮತ್ತು ಹೆಚ್‌ಡಿಕೆ ಸೇರಿ ದೆಹಲಿಯಲ್ಲಿ ಡಿ ಕೆ ಶಿವಕುಮಾರ್ಗೆ ಸಿಡಿ ಶಿವು ಎಂದು ಮರು ನಾಮಕರಣ ಮಾಡಿದ್ದೇವೆ'' ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ನ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುವುದು ಮತ್ತು ಕೆಳಗಿಳಿಯುವುದು ಅವರ ಆಂತರಿಕ ವಿಷಯ. ಆದರೆ, ಕಾಂಗ್ರೆಸ್ ಸರ್ಕಾರ ಬರಲು, ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಸಿದ್ದರಾಮಯ್ಯನವರೇ ಮೂಲ ಕಾರಣ. ಕೆಲವರು ಎದೆ ಉಬ್ಬಿಸಿ ಈ ಸರ್ಕಾರ ಬರಲು ನನ್ನ ಪಾತ್ರವೂ ಇದೆ ಎನ್ನುತ್ತಿದ್ದಾರೆ ಎನ್ನುವ ಮೂಲಕ ಡಿಸಿಎಂ ಡಿ. ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಗುಡುಗಿದ ರಮೇಶ್ ಜಾರಕಿಹೊಳಿ, ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ಕಾಂಗ್ರೆಸ್ ಪಕ್ಷದ ಅಧೋಗತಿ ಆರಂಭ ಎಂದು ಭವಿಷ್ಯ ನುಡಿದರು.
ಮುಡಾ ಹಗರಣ ಖಂಡಿಸಿ ಬಿಜೆಪಿ ಮೈಸೂರು ಚಲೋ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಮುಡಾಗಿಂತಲೂ ದೊಡ್ಡದು ವಾಲ್ಮೀಕಿ ನಿಗಮದ ಹಗರಣ. ಅದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದ್ದಾರೆ. ಹಾಗಾಗಿ, ಬಳ್ಳಾರಿಗೆ ಪಾದಯಾತ್ರೆ ಮಾಡೋದು ಒಳ್ಳೆಯದು. ಆ ಪಾದಯಾತ್ರೆ ಮೈಸೂರಿಗೆ ಸೀಮಿತ ಸರಿಯಲ್ಲ. ರಾಜ್ಯದಲ್ಲಿ ಲಿಂಗಾಯತ, ಮುಸ್ಲಿಂ, ಎಸ್ಸಿ ಸಮುದಾಯದ ನಂತರ ವಾಲ್ಮೀಕಿ ಅತೀ ದೊಡ್ಡ ಸಮುದಾಯ. ಆ ಜನಾಂಗಕ್ಕೆ ಮೋಸ ಮಾಡಿರುವ ಸರ್ಕಾರದ ವಿರುದ್ಧ ಕೂಡಲಸಂಗಮ ಟು ಬಳ್ಳಾರಿ ಪಾದಯಾತ್ರೆಗೆ ದಿಲ್ಲಿ ನಾಯಕರ ಬಳಿ ಅನುಮತಿ ಕೇಳಿದ್ದೇನೆ. ನಾನು ಮತ್ತು ಯತ್ನಾಳ್ ಸೇರಿ ಕೆಲ ಶಾಸಕರು ಈ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.