ಹುಬ್ಬಳ್ಳಿ:ಧಾರವಾಡ ಜಿಲ್ಲೆಯನವಲಗುಂದ ಕಾಮದೇವರು ಇಷ್ಟಾರ್ಥ ಸಿದ್ದಿ ದೈವವಾಗಿದ್ದಾನೆ. ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಕಲಿಯುಗದ ಕಾಮಧೇನು ಎಂಬ ಖ್ಯಾತಿಯೂ ಇದೆ. ರಾಜ್ಯದ ನಾನಾ ಭಾಗಗಳಲ್ಲಿ ಆಚರಿಸುವ ಹೋಳಿ ಆಚರಣೆ ಹಾಗೂ ನವಲಗುಂದ ರಾಮಲಿಂಗ ಕಾಮದೇವರಿಗೂ ಸಾಕಷ್ಟು ವ್ಯತ್ಯಾಸವಿದೆ, ಅಷ್ಟೇ ಮಹತ್ವವಿದೆ. ಇಲ್ಲಿ ವಿಶಿಷ್ಟ ಆಚರಣೆ ಮೂಲಕ ಕಾಮದೇವರನ್ನು ಪೂಜಿಸಲಾಗುತ್ತದೆ.
ಕೇವಲ ಬಣ್ಣ, ಓಕುಳಿ, ಹಲಗೆ ವಾದನಕ್ಕಷ್ಟೇ ಸೀಮಿತಗೊಳ್ಳದೇ ಭಯ ಭಕ್ತಿಗೆ ಒಲಿವ, ಬೇಡಿದ್ದನ್ನು ದಯಪಾಲಿಸುವ ಮಹಿಮಾನ್ವಿತ ದೈವ, ಸಂತಾನ ಹೀನರಿಗೆ ಸಂತಾನಭಾಗ್ಯ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ನೀಡುತ್ತಾನೆ. ಭಕ್ತಿಯಿಂದ ಭಜಿಸುವವರಿಗೆ ಈತ ಅಕ್ಷರಶಃ ಕಾಮಧೇನು ಕಲ್ಪವೃಕ್ಷ ಆಗಿದ್ದಾನೆ ಎನ್ನುತ್ತಾರೆ ಭಕ್ತರು.
ನವಲಗುಂದದಲ್ಲಿ ಹೋಳಿ ಹುಣ್ಣಿಮೆ ದಿನ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಏಕಾದಶಿ ರಾತ್ರಿ ಕಾಮಣ್ಣನ ಪ್ರತಿಷ್ಠಾಪನೆಯಾಗಲಿದ್ದು, ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಯ, ಭಕ್ತಿ, ಶ್ರದ್ಧೆಯಿಂದ ಆಗಮಿಸುತ್ತಾರೆ. ಹಿಂದೂ - ಮುಸ್ಲಿಂ ಬಾಂಧವರು ಸೇರಿಕೊಂಡು ಹಿಂದೂ ಪದ್ದತಿಯಂತೆ ಹಗಲಿರುಳೆನ್ನದೇ ಶ್ರಮವಹಿಸಿ ಪ್ರತಿಷ್ಠಾಪನೆಯಿಂದ ಹಿಡಿದು ಕಾಮ ದಹನದವರೆಗೂ ಸೇವೆ ಸಲ್ಲಿಸುತ್ತಾರೆ. ಪ್ರತಿಯೊಂದು ಓಣಿಯಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣಗಳಲ್ಲಿ ಇಷ್ಟಾರ್ಥ ಪೂರೈಸಿಕೊಳ್ಳಲು ಮಹಿಳೆಯರು ಉಪವಾಸ ವೃತ ಮಾಡಿ ಭಕ್ತಿಯಿಂದ ಪೂಜಿಸಿ ಹರಕೆ ತೀರಿಸುತ್ತಾರೆ.
ಐತಿಹಾಸಿಕ ಹಿನ್ನೆಲೆ: ಸವಣೂರು ನವಾಬರ ಆಡಳಿತಾವಧಿಯಲ್ಲಿ ಸಿದ್ದಿ ಪುರುಷನೊಬ್ಬ ವಿಶೇಷ ನಕ್ಷತ್ರ ದಿನದಂದು ವಿವಿಧ ಬಗೆಯ ಗಿಡಮೂಲಿಕೆ ಕಟ್ಟೆಗೆಗಳನ್ನು ಆಯ್ದು ತಂದು ಕಾಮಕಾಷ್ಠ ಮೂರ್ತಿ ರಚಿಸಲು ಸಿದ್ದನಾದನಂತೆ. ಇದೇ ವೇಳೆ, 99 ಗಿಡಮೂಲಿಕೆ ಕಟ್ಟೆಗೆಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಂಕಲ್ಪಕ್ಕೆ ಮುಂದಾದ, ಆದರೆ ಇನ್ನೊಂದು ಗಿಡಮೂಲಿಕೆ ಕಟ್ಟಿಗೆ ಸಿಕ್ಕಿದ್ದರೆ ಆತನ ಲೌಕಿಕ ಸಂಕಲ್ಪದ ಮೂರ್ತಿಗೆ ಜೀವಕಳೆ ಬರುತ್ತಿತ್ತು ಎಂಬ ಪ್ರತೀತಿ ಇದೆ.
ಅಷ್ಟರಲ್ಲಿ ದೈವ ಪುರುಷ ದೈವಾಧೀನನಾದರೆಂದು ಹೇಳುತ್ತಾರೆ. ಇನ್ನೊಂದು ಮೂಲಿಕೆ ಜೋಡಣೆಗಾಗಿ ಆತ ಕೊರೆದ ರಂಧ್ರ ಇಂದಿಗೂ ಕಾಣಬಹುದಾಗಿದೆ. ನೂರಾರು ವರ್ಷದ ಹಿಂದೆ ಸಿದ್ದಿ ಪುರುಷನ ಹಸ್ತದಿಂದ ತಯಾರಿಸಿದ ಮೂರ್ತಿಯನ್ನು ನವಲಗುಂದ ಪಟ್ಟಣಕ್ಕೆ ಯಾರು ಬರಮಾಡಿಕೊಂಡರೆಂಬುದು ಇಂದಿಗೂ ನಿಗೂಢವಾಗಿ ಉಳಿದಿದೆ.
ಇಷ್ಟಾರ್ಥ ಪೂರೈಸುವ ಆದಿದೇವ: ರಾಮಲಿಂಗೇಶ್ವರ ಕಾಮದೇವರು ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಕರುಣಾಳು ಆಗಿದ್ದಾನೆ. ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ರಾಮಲಿಂಗತೊಟ್ಟಿಲು, ಕಂಕಣ ಭಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ ವಸತಿ ಇಲ್ಲದವರು ಛತ್ರಿ ಛಾಮರ, ಉದ್ಯೋಗ ಬದುಕಿಗೆ ನೆಲೆ ಕಂಡುಕೊಳ್ಳಬೇಕಾದರೆ, ಬೆಳ್ಳಿ ಪಾದ ಅಥವಾ ಕುದುರೆ ಹರಕೆ ಹೊತ್ತು ಪೂಜಿಸಿದರೆ ಅವರ ಬೇಡಿಕೆ ಖಂಡಿತ ಈಡೇರುತ್ತದೆ ಎಂಬ ಪ್ರತೀತಿ ಇದೆ.