ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ವಿಜಯೋತ್ಸವದ ವೇಳೆ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿದ್ದು, ವಿಧಾನಸೌಧ ಭದ್ರತಾ ವಿಭಾಗದ ಎಸಿಪಿ ಶಿವಕುಮಾರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
"ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಡಾ.ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಸಂಜೆ 6ರಿಂದ 6:30ರ ಸುಮಾರಿಗೆ ಯಾರೋ ಒಬ್ಬ ವ್ಯಕ್ತಿ ವಿಧಾನಸೌಧದ ಪೂರ್ವ ದ್ವಾರದ ಬಳಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಎಂಬ ಸುದ್ದಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಸಂಬಂಧ ಲಭ್ಯವಿರುವ ಫೂಟೇಜ್ಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ" ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ವಿಡಿಯೋ ಫೂಟೇಜ್ನಲ್ಲಿ ಆಡಿಯೋ ಅಸ್ಪಷ್ಟವಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯೋ ಅಥವಾ ನಾಸಿರ್ ಸರ್ ಜಿಂದಾಬಾದ್ ಘೋಷಣೆಯೂ ಸ್ಪಷ್ಟವಾಗಿಲ್ಲ. ಸದ್ಯ ಸೊಮೊಟೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಡಿಯೋ ಸಂಗ್ರಹಿಸಿ ಎಫ್ಎಸ್ಎಲ್ ಕಳುಹಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಘೋಷಣೆ ಕೂಗಿದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಬಿಜೆಪಿ ನಿಯೋಗದಿಂದ ದೂರು:ಇದೇ ವಿಚಾರಕ್ಕೆ ಸಂಬಂಧಿಸಿದಂತೆನಾಸೀರ್ ಹುಸೇನ್ ಹಾಗೂ ಬೆಂಬಲಿಗರ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದೆ.
ಬಳಿಕ ಮಾತನಾಡಿದ ಆರ್.ಅಶೋಕ್, "ವಿಧಾನಸೌಧದ ಮೇಲೆ ಇವರು ಪಾಕಿಸ್ತಾನ ಬಾವುಟ ಹಾರಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಶಕ್ತಿಸೌಧದ ಒಳಗೆ ಈ ರೀತಿಯವರು ಎಷ್ಟು ಜನ ಅಡಗಿದ್ದಾರೋ?. ಮುಂಬೈ ತಾಜ್ ಹೋಟೆಲ್ನಲ್ಲಿ ಆದಂತಹ ಭಯ ನನಗೆ ಆಗುತ್ತಿದೆ. ಪೊಲೀಸರು ಕೈ ಕಟ್ಟಿ ನಿಂತುಕೊಂಡಿದ್ದಾರೆ. ಪಿಎಫ್ಐ ಸೇರಿದಂತೆ ದೇಶದ್ರೋಹಿಗಳ ವಿರುದ್ಧದ 1,200 ಪ್ರಕರಣಗಳನ್ನು ಈ ಸರ್ಕಾರ ವಾಪಸ್ ತೆಗೆದುಕೊಂಡಿದೆ. ಪೊಲೀಸರು ಪ್ರಶ್ನೆ ಮಾಡಿದರೆ ವರ್ಗಾವಣೆ ಮಾಡುತ್ತಾರೆ ಅಂತಾ ಭಯಗೊಂಡಿದ್ದಾರೆ".