ಹುಬ್ಬಳ್ಳಿ:ಗಣೇಶೋತ್ಸವ ಆಚರಣೆಗೆ ದಿನಗಣನೆ ಆರಂಭವಾಗಿದ್ದು, ಅವಳಿ ನಗರದಲ್ಲಿ ಭರದ ಸಿದ್ಧತೆ ನಡೆದಿದೆ. ಉತ್ತಮ ಮುಂಗಾರು ಮಳೆಯಿಂದಾಗಿ ರೈತರು ಬಿತ್ತನೆ ಕಾರ್ಯ ಮುಗಿಸಿ, ಬೆಳೆಗಳ ಆರೈಕೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಚುರುಕು ಪಡೆದಿದ್ದು, ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಸಂಭ್ರಮ ಕಳೆಗಟ್ಟಿದೆ.
ಕಳೆದ ವರ್ಷ ತೀವ್ರ ಬರಗಾಲವಿತ್ತು. ರೈತರ ಬೆಳೆಗಳೆಲ್ಲ ನೀರಿಲ್ಲದೆ ಒಣಗಿ ಹೋಗಿ ಅಪಾರ ನಷ್ಟ ಅನುಭವಿಸಿದ್ದರು. ಇದು ಗಣೇಶೋತ್ಸವ ಆಚರಣೆ ಮೇಲೂ ಪರಿಣಾಮ ಬೀರಿತ್ತು. ಆದರೆ, ಈ ಬಾರಿ ಮಳೆ ಜೋರಾಗಿ ಸುರಿದಿದೆ. ಹೆಸರು ಬೆಳೆಯೂ ಕೈಗೆ ಬಂದಿದೆ. ಹೀಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ಜೋರಾಗಿಯೇ
ನಡೆದಿದೆ. ಮಾರುಕಟ್ಟೆಯಲ್ಲೂ ತರಹೇವಾರಿ ಅಲಂಕೃತ ವಸ್ತುಗಳು ಆಕರ್ಷಿಸತೊಡಗಿವೆ.
ಹುಬ್ಬಳ್ಳಿ ಗಣೇಶನೆಂದ್ರೆ ವಿಶೇಷ : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮುಂಬೈ ಹಾಗೂ ಹೈದ್ರಾಬಾದ್ ಮಾದರಿಯಲ್ಲಿ ಬೃಹತ್ ಪ್ರಮಾಣದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ವಾಡಿಕೆ ಇದೆ. ಇಲ್ಲಿ ಕಳೆದ ಹಲವು ದಶಕಗಳಿಂದ 10 ಅಡಿಯಿಂದ ಹಿಡಿದು 21 ಅಡಿಗಳವರೆಗಿನ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಈ ಕುರಿತಂತೆ ಹುಬ್ಬಳ್ಳಿ ಗಣೇಶೋತ್ಸವ ಮಹಾಮಂಡಳಿ ಉಪಾಧ್ಯಕ್ಷ ಶಾಂತರಾಜ ಪೋಳ ಮಾತನಾಡಿದ್ದು, ಮಹಾಮಂಡಳ ಅಂದಾಜಿಸಿದ ಪ್ರಕಾರ, 500 ರಿಂದ 600 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದರಲ್ಲಿ ಮರಾಠಗಲ್ಲಿಯ ಹುಬ್ಬಳ್ಳಿ ಕಾ ಮಹಾರಾಜ ಹಾಗೂ ದಾಜಿ ಬಾನಪೇಟೆಯ ಹುಬ್ಬಳ್ಳಿ ಕಾ ರಾಜ 21 ಅಡಿ ಎತ್ತರವಿರಲಿದೆ. ಹಳೇ ಹುಬ್ಬಳ್ಳಿ ಮಹಾರಾಜನ ಎತ್ತರ 15 ಅಡಿ ಇರಲಿದೆ. 100ಕ್ಕೂ ಹೆಚ್ಚು ಮೂರ್ತಿಗಳು 15 ಅಡಿ ಎತ್ತರ ಇರಲಿವೆ. ಕ್ರಮವಾಗಿ 5ನೇ ದಿನ, 7ನೇ ದಿನ, 9 ಹಾಗೂ 11 ನೇ ದಿನ ಬೃಹತ್ ಮೆರವಣಿಗೆ ಮೂಲಕ ಗಣೇಶ ನಿಮಜ್ಜನ ಮಾಡಲಾಗುತ್ತದೆ. ಆಯಾ ಪ್ರದೇಶದ ಪ್ರಮುಖರು ಹಂತ ಹಂತವಾಗಿ ಯಾವುದೇ ಗೊಂದಲ, ಗಲಾಟೆಗೆ ಅವಕಾಶ ನೀಡದಂತೆ ಬೆಳಗ್ಗೆಯಿಂದ ಮೆರವಣಿಗೆ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೂ ನಡೆಯಲಿದೆ ಎಂದರು.