ಮೈಸೂರು:''ಬೆಂಗಳೂರು ಅರಮನೆ ಜಾಗಕ್ಕೇ ಈಗಲೂ ಕೂಡ ನಾವೇ ಓನರ್ ಆಗಿದ್ದೇವೆ. ಈ ಬಗ್ಗೆ ಕಳೆದ 30 ವರ್ಷಗಳಿಂದಲೂ ಕಾನೂನು ಸಮರ ಮಾಡಿದ್ದೇವೆ. ಮುಂದೆಯೂ ಹೋರಾಟ ಮಾಡುತ್ತೇವೆ'' ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಅರಮನೆ ರಸ್ತೆ ಟಿಡಿಆರ್ ತಪ್ಪಿಸಲು ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬೆನ್ನಲ್ಲೇ ಪ್ರಮೋದಾದೇವಿ ಒಡೆಯರ್ ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು.
''ನಾನು ಸಂಪುಟ ನಿರ್ಧಾರದ ಬಗ್ಗೆ ನೋಡಿದೆ. 1996ರಲ್ಲಿ ಸ್ವಾಧೀನ ಹಾಗೂ ತಡೆ ಆರ್ಡರ್ ಕೂಡ ನಮ್ಮ ಬಳಿಯಿದೆ. ಸುಪ್ರೀಂಕೋರ್ಟ್ ಕೂಡ ಬೆಂಗಳೂರು ಅರಮನೆ ಜಾಗದ ಬಗ್ಗೆ ಅಭಿಪ್ರಾಯ ಹೇಳಿದೆ. ಕರ್ನಾಟಕದ ಸರ್ಕಾರದ ಅಣತಿಯಂತೆ ಇದುವರೆಗೂ ಅಲ್ಲಿ ಎಲ್ಲವೂ ನಡೆದಿದೆ. ಯಾವುದೂ ಕೂಡ ಅವರಿಗೆ ಗೊತ್ತಿಲ್ಲದ ರೀತಿ ಆಗಿಲ್ಲ. ಅವರು ಸ್ಟೇ ಇಲ್ಲ ಅಂದಿದ್ದಾರೆ, ಆದರೆ ಸ್ಟೇ ಇದೆ, ಒನರ್ಶಿಪ್ ಕೂಡ ಇದೆ. ಈಗಲೂ ನಾವೇ ಬೆಂಗಳೂರು ಅರಮನೆ ಜಾಗದ ಯಜಮಾನರಾಗಿದ್ದೇವೆ'' ಎಂದರು.
''ನಾನು ಕೆಲ ಹೆಸರನ್ನು ಹೇಳುತ್ತ್ತೇನೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಅಕ್ಕ ತಂಗಿಯರೂ ಕೂಡ ಓನರ್ಶಿಪ್ನಲ್ಲಿಲ್ಲಿದ್ದಾರೆ. ಇನ್ನೂ ಅನೇಕರ ಹೆಸರಿದೆ. ರಸ್ತೆಗೆ ಹೋಗಿರುವ ಆಸ್ತಿ ಕೂಡ ನಮ್ಮದೇ ಆಗಿದೆ. 15 ಎಕರೆ 36 ಗುಂಟೆ ಬಳಸಿದ್ದಾರೆ. ಟಿಡಿಆರ್ ಕೊಡಬಾರದು ಅಂತ ಈ ರೀತಿ ಮಾಡಿದ್ದಾರೆ'' ಎಂದು ಆರೋಪಿಸಿದರು.
''ಟಿಡಿಆರ್ ಹೇಗೆ ಬಂತೆಂದರೆ, ಜನರಿಗೆ ರಸ್ತೆ ಬೇಕು, ನಿಮ್ಮ ಜಾಗ ಬಳಸಿಕೊಳ್ಳುತ್ತೇವೆ. ನಿಮಗೆ ಟಿಡಿಆರ್ ಕೊಡುತ್ತೇವೆ ಅಂತ ಬಿಬಿಎಂಪಿ ಹೇಳಿತ್ತು. ಟಿಡಿಆರ್ ಕೊಡುತ್ತೇವೆ ಅಂತ ಕೋರ್ಟ್ಗೆ ಹೋಗಿದ್ದರು. 2014ರಲ್ಲಿ ಇದರ ಬಗ್ಗೆ ಚರ್ಚೆ ಆಗಿದೆ. ಎಲ್ಲ ವಾದ, ವಿವಾದ ಕೇಳಿ ಟಿಡಿಆರ್ ಒಪ್ಪಿದ್ದರು'' ಎಂದು ತಿಳಿಸಿದರು.
''ಈಗ 10/12/2024ರಲ್ಲಿ ನೀವು ಹೀಗೆ ಡ್ರ್ಯಾಗ್ ಮಾಡ್ತಿದ್ದೀರಾ ಅಂತ ಹೇಳಿದರು. ಟಿಡಿಆರ್ ಮೌಲ್ಯ ಅಂದು ಫಿಕ್ಸ್ ಆಗಿರಲಿಲ್ಲ. ಇವತ್ತು 3 ಸಾವಿರ ಕೋಟಿ ಬರುತ್ತೆ ಅಂತ ಈಗ ಬೇರೆ ರೀತಿ ಮಾಡುತ್ತಿದ್ದಾರೆ. ಆವಾಗಲೇ ನಮಗೆ ಟಿಡಿಆರ್ ಕೊಟ್ಟಿದ್ದರೆ ಇಷ್ಟು ಮೊತ್ತ ಆಗುತ್ತಿರಲಿಲ್ಲ. ತಡೆ ಆದೇಶ ಇದೆ, ನಾವೇ ಪೋಶಿಷನ್ನಲ್ಲಿದ್ದೇವೆ. ಕಾನೂನು ಮೂಲಕ ಹೋರಾಟ ಮಾಡುತ್ತೇವೆ'' ಎಂದು ಪ್ರಮೋದಾದೇವಿ ಒಡೆಯರ್ ಹೇಳಿದರು.
ಅರಮನೆ ಟಾರ್ಗೆಟ್: ''ಅರಮನೆ ಟಾರ್ಗೆಟ್ ಆಗುತ್ತಿದೆಯಾ? ಇಲ್ವಾ ಎಂದು ನೀವೇ ಅರ್ಥ ಮಾಡಿಕೊಳ್ಳಿ. ಮೈಸೂರು ಅರಮನೆ ಆಯ್ತು, ಬಳಿಕ ಚಾಮುಂಡಿ ಬೆಟ್ಟ ಪ್ರಾಧಿಕಾರ ಮಾಡಿದ್ದಾರೆ. ಆದರೆ ಬೆಟ್ಟದ ಕುರಿತು ಪ್ರಕರಣ ಇದೆ. ನಮ್ಮಿಂದ ಯಾರಿಗೂ ತೊಂದರೆ ಇಲ್ಲ. ಆದರೆ ನಮಗೆ ಯಾಕೆ ತೊಂದರೆ ಕೊಡುತ್ತಿದ್ದಾರೆಂದು ಗೊತ್ತಿಲ್ಲ. ದ್ವೇಷ ಇದೆಯಾ, ಇಲ್ವಾ ಅದೂ ಗೊತ್ತಿಲ್ಲ. ನಮ್ಮನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆಂಬುದು ಗೊತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ಹೋರಾಟ: ''ಕಳೆದ 30 ವರ್ಷಗಳಿಂದಲೂ ಕಾನೂನು ಸಮರ ಮಾಡಿದ್ದೇವೆ. ಮುಂದೆಯೂ ಹೋರಾಟ ಮಾಡುತ್ತೇವೆ. ಅವರು ಕಲ್ಲು ಎಸೆದರೆ ನಾವು ಡಿಫೆಂಡ್ ಮಾಡಿಕೊಳ್ಳಬೇಕು. ಅದನ್ನು ಮಾಡಿಕೊಳ್ಳುತ್ತೇವೆ. ಕಾನೂನು ಸಚಿವರಿಗೆ ಮಾಹಿತಿ ಕೊರತೆ ಇದೆಯಾ, ಇಲ್ವಾ ಗೊತ್ತಿಲ್ಲ. ಟಿಡಿಆರ್ ಕೊಡಬೇಕು ಅಂತ ಕೋರ್ಟ್ ಆದೇಶ ಇದ್ದರೂ ಈ ರೀತಿ ಮಾಡುತ್ತಿದ್ದಾರೆ'' ಎಂದು ಪ್ರಮೋದಾದೇವಿ ಒಡೆಯರ್ ಕಿಡಿಕಾರಿದರು.
ಇದನ್ನೂ ಓದಿ:ಅರಮನೆ ಮೈದಾನ ರಸ್ತೆ ಅಗಲೀಕರಣ ಯೋಜನೆ ಕೈಬಿಡಲು ಅಧಿಕಾರ ನೀಡುವ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ತೀರ್ಮಾನ!