ಶಿವಮೊಗ್ಗ: ಹೆಚ್ಚಿನ ಬಡ್ಡಿಗೆ ಸಾಲ ನೀಡುವುದು, ಮೀಟರ್ ಬಡ್ಡಿ ಹಾಕುವುದು, ಸಾಲ ನೀಡಿ ಕಾರು, ದುಬಾರಿ ಬೈಕ್ಗಳನ್ನು ಅಡಮಾನ ಇಟ್ಟುಕೊಳ್ಳುವುದು, ಸರಿಯಾದ ಸಮಯಕ್ಕೆ ಬಡ್ಡಿ ಹಣ ಕಟ್ಟದಿದ್ದರೆ ಕಿರುಕುಳ ನೀಡುವುದನ್ನು ಮಾಡುತ್ತಿದ್ದವರ ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿ ಅಪಾರ ಪ್ರಮಾಣದ ಸ್ವತ್ತು ವಶಪಡಿಸಿಕೊಂಡಿರುವುದಾಗಿ ಶಿವಮೊಗ್ಗದ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಅವರ ಆದೇಶದ ಮೇರೆಗೆ ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆಸಲಾಗಿದೆ. ಮುಖ್ಯವಾಗಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪದ ವ್ಯಕ್ತಿಯೊಬ್ಬರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಎಲ್ಲಾ ದಾಳಿ ವೇಳೆ ಕೋಟಿಗಟ್ಟಲೆ ವ್ಯವಹಾರ ನಡೆದಿರುವುದು, ವಾಹನಗಳನ್ನು ಅಡಮಾನ ಇಟ್ಟುಕೊಂಡಿರುವುದು ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.