ಬೆಂಗಳೂರು: ಸಂಚಾರಿ ಪೊಲೀಸ್ ಇಲಾಖೆಯ ಹೆಸರಿನಲ್ಲಿಯೇ ಸಾರ್ವಜನಿಕರಿಗೆ ಕರೆ ಮಾಡಿ ದಂಡ ಪಾವತಿ, ಇನ್ಶುರೆನ್ಸ್, ಹಿಟ್ ಆ್ಯಂಡ್ ರನ್ ಆರೋಪ ಮತ್ತಿತರ ಕಾರಣಗಳನ್ನು ನೀಡಿ ವಂಚನೆಗೆ ಯತ್ನಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ನಕಲಿ ಕರೆಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸಂಚಾರಿ ಪೊಲೀಸರೆಂದು ಸಾರ್ವಜನಿಕರಿಗೆ ಕರೆ ಮಾಡುತ್ತಿರುವ ವಂಚಕರು, ನಕಲಿ ದಂಡವನ್ನ ತೋರಿಸಿ ಲಿಂಕ್ ಕಳಿಸಿ ಹಣ ಪಾವತಿಗೆ ಒತ್ತಾಯಿಸುವುದು, ಇನ್ಶುರೆನ್ಸ್ ನೀಡುವುದಾಗಿ ವಂಚಿಸುತ್ತಿದ್ದಾರೆ. ಅಲ್ಲದೆ, ನಿಮ್ಮ ವಾಹನ ಹಿಟ್ ಆ್ಯಂಡ್ ರನ್ ಆಗಿರುವುದಾಗಿ ಬೆದರಿಸಿ ವಂಚನೆಗೆ ಯತ್ನಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆಗಳು:
- ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಲಗತ್ತುಗಳನ್ನು ಡೌನ್ಲೋಡ್ ಮಾಡಬೇಡಿ.
- ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಡಿ ಅಥವಾ ಹಣ ಪಾವತಿ ಮಾಡದಿರಿ.
- ಸಂಚಾರಿ ಪೊಲೀಸ್ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ಕರೆಗಳು ಅಥವಾ ಸಂದೇಶಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸಿಕೊಳ್ಳಿ.
- ಸಂಚಾರಿ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಸಹಾಯವಾಣಿ ಸಂಖ್ಯೆಗೆ (080-22868550 /22868444) ದೂರು ದಾಖಲಿಸಿ.
- ಮಾಹಿತಿ ಒದಗಿಸುವ ಮೊದಲು ಅಧಿಕಾರಿಗಳ ಗುರುತುಗಳನ್ನು ಪರಿಶೀಲಿಸಿ.
- ದಂಡ ಅಥವಾ ಸೇವೆಗಳಿಗಾಗಿ, ದಂಡ ಪಾವತಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ.
- ಸಾಫ್ಟ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳನ್ನು ನವೀಕೃತವಾಗಿರಿಸಿಕೊಳ್ಳಿ.
- ಅನುಮಾನಾಸ್ಪದ ಚಟುವಟಿಕೆಗಳನ್ನು ಪೊಲೀಸರಿಗೆ ವರದಿ ಮಾಡುವ ಮೂಲಕ ಸುರಕ್ಷಿತ ಹಾಗೂ ಜಾಗರೂಕರಾಗಿರಿ ಎಂದು ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ:ಆರ್ಡರ್ ಮಾಡದಿದ್ದರೂ ಮನೆಗೆ ಬಂದ ಹೇರ್ಡ್ರೈಯರ್: ಆನ್ ಮಾಡುತ್ತಿದ್ದಂತೆ ಸ್ಫೋಟ, ಮಹಿಳೆಯ ಎರಡೂ ಮುಂಗೈ ಕಟ್