ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ ಕಾಲಿಗೆ ಗುಂಡೇಟು (ETV Bharat) ಕಲಬುರಗಿ: ಬಂಧಿಸಲು ಆಗಮಿಸಿದ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಶನಿವಾರ ರಾತ್ರಿ ನಗರದ ಹೊರವಲಯದ ಬೇಲೂರು ಕ್ರಾಸ್ ಬಳಿ ನಡೆದಿದೆ.
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅವತಾರ್ ಸಿಂಗ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., "ರೌಡಿಶೀಟರ್ ಅವತಾರ್ ಸಿಂಗ್ ಎಂಬವನ ಮೇಲೆ ನಮ್ಮ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಈತ ಏಪ್ರಿಲ್ ತಿಂಗಳಿನಲ್ಲಿ ತನ್ನ ಸಹಚರನೊಂದಿಗೆ ಸೇರಿ ಡಾಬಾವೊಂದರಲ್ಲಿ ದರೋಡೆ ಮಾಡಿದ್ದ. ಕಳೆದ ನಾಲ್ಕು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ. ಸ್ಥಳೀಯ ಪೊಲೀಸರು ಮಾಹಿತಿ ಮೇರೆಗೆ ಬಂಧನಕ್ಕೆ ಜಾಲ ಬೀಸಿದ್ದರು. ಆರೋಪಿಯನ್ನು ವಶಪಡಿಸಿಕೊಂಡು ಬರುವಾಗ ನಮ್ಮ ಇಬ್ಬರು ಸಿಬ್ಬಂದಿ ಮೇಲೆ ಆತ ಹಲ್ಲೆ ಮಾಡಿದ್ದಾನೆ. ಆದರೂ ಬಂಧಿಸಲು ಪ್ರಯತ್ನಿಸಿದಾಗ ಮತ್ತೂ ಹಲ್ಲೆ ಮುಂದುವರಿಸಿದ್ದಾನೆ. ಆಗ ನಮ್ಮ ಸಿಬ್ಬಂದಿ ಕಾಲಿಗೆ ಫೈರ್ ಮಾಡಿದ್ದಾರೆ. ಈತನ ವಿರುದ್ಧ ಕಲಬುರಗಿ ಸೇರಿದಂತೆ ಬೇರೆ ಬೇರೆ ಕಡೆ ದರೋಡೆ, ಕೊಲೆಯತ್ನ ಸೇರಿ ಒಟ್ಟು 13 ಪ್ರಕರಣಗಳು ದಾಖಲಾಗಿವೆ." ಎಂದು ತಿಳಿಸಿದರು.
ಇದನ್ನೂ ಓದಿ:ಹೆದ್ದಾರಿಯಲ್ಲಿ ದರೋಡೆ ಯತ್ನ: 56 ಪ್ರಕರಣಗಳ ರೌಡಿಶೀಟರ್ ಕಾಲಿಗೆ ಗುಂಡೇಟು - Rowdy sheeter Shot