ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಳೆದ 12 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಲಿದೆ. ಆರೋಪಿಗಳಾದ ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವುದು ಬಹುತೇಕ ಖಚಿತವಾಗಿದೆ.
ಪ್ರಕರಣದ ಬಂಧಿತ ಆರೋಪಿಗಳನ್ನು ಗುರುವಾರ ನ್ಯಾಯಾಲಯದ ಎದುರು ಹಾಜರುಪಡಿಸಿದ್ದ ಪೊಲೀಸರು, ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ಅವರನ್ನು ಇನ್ನೂ ಎರಡು ದಿನ ಕಸ್ಟಡಿಗೆ ಪಡೆದಿದ್ದರು. ದರ್ಶನ್ ಮನೆಯಲ್ಲಿ ಸಿಕ್ಕ ಹಣದ ಮೂಲದ ಕುರಿತು ತನಿಖೆ, ಸಾಕ್ಷ್ಯನಾಶಕ್ಕಾಗಿ ವಿನಯ್ ಹಾಗೂ ಪ್ರದೋಶ್ ಮಾಡಿದ್ದ ಯತ್ನಗಳು ಹಾಗೂ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಲು ಧನರಾಜ್ ಒದಗಿಸಿದ್ದ ಮೆಗ್ಗರ್ ಡಿವೈಸ್ ಕುರಿತು ತನಿಖೆ ಅಗತ್ಯ ಇರುವುದರಿಂದ ನಾಲ್ವರನ್ನೂ ಕಸ್ಟಡಿಗೆ ಪಡೆಯಲಾಗಿತ್ತು. ಇಂದು ಕಸ್ಟಡಿ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.